ಶಿಕಾರಿಪುರ ಲೈವ್:
ಕಸ್ತೂರಿ ರಂಗನ್ ವರದಿ ಜಾರಿ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಪಕ್ಷಾತೀತವಾಗಿ ಬುಧವಾರ ತಾಲೂಕಿನ ಅಂಬಾರಗೊಪ್ಪ ಗ್ರಾಮದಿಂದ ಪಟ್ಟಣದ ತಾಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿ, ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ಕಸ್ತೂರಿ ರಂಗನ್ ವರದಿ ಜಾರಿಯಿಂದ ರೈತ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಲಿದೆ. ಕಸ್ತೂರಿ ರಂಗನ್ ವರದಿ ಜಾರಿ ಮೂಲಕ ರೈತರಿಂದ ಭೂಮಿ ಕಸಿದುಕೊಳ್ಳುವ ಹುನ್ನಾರವನ್ನು ಆಳುವ ಸರ್ಕಾರಗಳು ಮಾಡುತ್ತಿವೆ. ಅರಣ್ಯ ಕಾಯ್ದೆ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ ನಡೆಯುತ್ತಿದೆ. ನಮ್ಮಿಂದ ಗೆದ್ದು ಹೋದ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ರೈತರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, ನಾವು ಜೀವ ಬಿಟ್ಟೇವು ಭೂಮಿ ಕೊಡುವುದಿಲ್ಲ. ಆಳುವ ಸರ್ಕಾರಗಳು ರೈತರ ಪರ ಇರಬೇಕು. ಆಳುವ ಎಲ್ಲ ಪಕ್ಷಗಳು ರೈತರ ಹಿತ ಕಾಯುವುದನ್ನು ಮರೆತಿವೆ ಎಂದು ಟೀಕಿಸಿದರು.
ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಈಶ್ವರಪ್ಪ, ಸೇವಾದಳ ಅಧ್ಯಕ್ಷ ಕಬೂತರ್, ರೈತ ಸಂಘದ ಅಧ್ಯಕ್ಷ ಪ್ಯಾಟೇ ಈರಣ್ಣ, ಮುಖಂಡರಾದ ಬಸವರಾಜ್ ಪಾಟೀಲ್ ಆನವಟ್ಟಿ ಜಗ್ಗಣ್ಣ, ಸಂದೇಶ್, ಗುಡ್ಡಪ್ಪ, ತಬರೇಜ್, ಮಲ್ಲೇಶಪ್ಪ, ರವಿನಾಯ್ಕ, ಎಚ್. ಮಂಜು, ಭಾಗ್ಯರಾಜು, ಅಕ್ಷಯ್, ಮಂಜುನಾಯ್ಕ, ಬಸವರಾಜ್, ಮಹೇಂದ್ರ, ವಿವಿಧ ಗ್ರಾಮದ ರೈತರು ಉಪಸ್ಥಿತರಿದ್ದರು.
Leave a comment