ಶಿಕಾರಿಪುರ ಲೈವ್:
ಸದೃಢ ಆರೋಗ್ಯಕ್ಕೆ ಯೋಗಭ್ಯಾಸ ಸಹಕಾರಿಯಾಗಿದೆ ಎಂದು ಜಡೆ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಮಹಾಂತ ಸ್ವಾಮೀಜಿ ಸಲಹೆ ನೀಡಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಅಂಗಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ನಡೆದ 11ನೆಯ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಯೋಗವು ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ನೀಡಿದ ಉಡುಗೊರೆಯಾಗಿದೆ. ಯೋಗವು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕಾಗ್ರತೆ ಮತ್ತು ಸ್ಮರಣಾಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವನ್ನು ಬಲಪಡಿಸುತ್ತದೆ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದೆ, ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಬಹುದು. ವಿದ್ಯಾರ್ಥಿಗಳು ಮುಂಜಾನೆ ಒಂದು ಅಥವಾ ಅರ್ಧ ಘಂಟೆ ಯೋಗವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಮತ್ತು ಸಂಸ್ಥೆಯ ಆಡಳಿತ ಪ್ರತಿನಿಧಿ ಜಿ.ಎಸ್. ಶಿವಕುಮಾರ ಮಾತನಾಡಿ, ಡಾ.ಮಹಾಂತ ಸ್ವಾಮೀಜಿ ಮಹಾನ್ ತಪಸ್ವಿಗಳಾಗಿದ್ದಾರೆ. ಉತ್ತಮ ಯೋಗ ಪಟುಗಳಾಗಿದ್ದು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಎಂದು ಶ್ಲಾಘಿಸಿದ ಅವರು, ಯೋಗವು ಪ್ರಕೃತಿಯ ಕೊಡುಗೆಯಾಗಿದ್ದು,ಶಾಂತಿ,ನೆಮ್ಮದಿ ಮತ್ತು ಆರೋಗ್ಯ ವೃದ್ಧಿಗೆ ಸಾಧನವಾಗಿದೆ ಎಂದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಡಳಿತ ಸಮನ್ವಯ ಅಧಿಕಾರಿಗಳಾದ ಕುಬೇರಪ್ಪ, ಸಂಸ್ಥೆಯ ವಿವಿಧ ಅಂಗಸಂಸ್ಥೆಗಳ ಪ್ರಾಚಾರ್ಯರಾದ ವಿಶ್ವನಾಥ, ವಿದ್ಯಾ ಶಂಕರ್, ವೀರೆಂದ್ರ, ರವೀಂದ್ರ, ಸಿದ್ದೇಶ್ವರ, ಪ್ರಶಾಂತ್, ಪ್ರಶಾಂತ ಕುಬಸದ, ಸಂಸ್ಥೆಯ ಉಪನ್ಯಾಸಕರು,ಶಿಕ್ಷಕರು,ಸಿಬ್ಬಂದಿ ಉಪಸ್ಥಿತರಿದ್ದರು.
Leave a comment