ಶಿಕಾರಿಪುರ ಲೈವ್:
ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಹೆಚ್ಚಿನ ಆರ್ಥಿಕ ಸೇವೆಯನ್ನು ಸಹಕಾರಿ ಸಂಘಗಳು ಜನಸಾಮಾನ್ಯರಿಗೆ ನೀಡುತ್ತಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಶ್ಲಾಘಿಸಿದರು.
ಪಟ್ಟಣದ ವೀರಶೈವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಶ್ರಯದಲ್ಲಿ ನಬಾರ್ಡ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮೀಣ ಗೋದಾಮು ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಹಕಾರಿ ಸಂಘಗಳು ರೈತರ ಹಾಗೂ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿವೆ. ಸಹಕಾರಿ ಸಂಘದ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದ್ಯತೆ ನೀಡುತ್ತಿವೆ. ವೀರಶೈವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರಾಗುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ಸಾರ್ವಜನಿಕ ಸೇವೆ ಕ್ಷೇತ್ರದ ಸೇವೆಯನ್ನು ಆರಂಭಿಸಿದರು. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಸಂಘದ ಗೋದಾಮು ನಿರ್ಮಾಣ ಸೇರಿದಂತೆ ವಿವಿಧ ಸಹಕಾರಿ ಸಂಘಗಳ ಗೋದಾಮು ನಿರ್ಮಾಣಕ್ಕೆ .4.5 ಕೋಟಿ ಹಣವನ್ನು ಒದಗಿಸಿದ್ದಾರೆ ಎಂದು ಶ್ಲಾಘಿಸಿದರು.
ಕೇಂದ್ರ ಸರ್ಕಾರ 2 ಲಕ್ಷ ಕೋಟಿ ಹಣವನ್ನು ರೈತರ ಗೊಬ್ಬರಕ್ಕಾಗಿ ಕಾರ್ಖಾನೆಗಳಿಗೆ ನೀಡುತ್ತಿದೆ. ವೀರಶೈವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸ್ತುತ ರೈತರಿಗೆ 8 ಕೋಟಿ ಹಣವನ್ನು ಸಾಲವಾಗಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸಂಘದ ಅಡಿಯಲ್ಲಿ ಸೂಪರ್ ಮಾರ್ಕೆಟ್ ಮಾಡಲು ಮುಂದಾಗಬೇಕು. ತಾಲೂಕಿಗೆ ಮಾದರಿ ಸೊಸೈಟಿಯಾಗಿ ನಿರ್ಮಾಣ ಮಾಡಲು ಆಡಳಿತ ಮಂಡಳಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಪಿ. ಚಂದ್ರೇಗೌಡ, ಕೆಲವು ವರ್ಷಗಳ ಹಿಂದೆ ನಷ್ಟದಲ್ಲಿದ್ದ ಈ ಸಹಕಾರಿ ಸಂಘ ಇಂದು 17 ಲಕ್ಷ ರೂಪಾಯಿ ಲಾಭದಲ್ಲಿದೆ. ಅತ್ಯುತ್ತಮ ಸಹಕಾರಿ ಸಂಘವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ರೈತರಿಗೆ 8 ಕೋಟಿ ಹಣವನ್ನು ನೀಡಿದೆ. 92ರಷ್ಟು ವಸೂಲಾತಿ ನಡೆಯುತ್ತಿದೆ. ಪಕ್ಷಾತೀತವಾಗಿ ಸಂಘದ ಅಭಿವೃದ್ಧಿಗೆ ನಾವೆಲ್ಲಾ ಮುಂದಾಗಿದ್ದೇವೆ ಎಂದರು.
ವೀರಶೈವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಜಿ. ಸುರೇಂದ್ರಗೌಡ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದೂದಿಹಳ್ಳಿ ಬಸವರಾಜ್, ಎಚ್.ಎಸ್. ರವೀಂದ್ರ, ಮಾಜಿ ನಿರ್ದೇಶಕ ಬಿ.ಡಿ. ಭೂಕಾಂತ್, ಎಪಿಎಂಸಿ ಮಾಜಿ ರಾಜ್ಯ ಉಪಾಧ್ಯಕ್ಷ ಚುರ್ಚಿಗುಂಡಿ ರುದ್ರಮುನಿ, ವೀರಶೈವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸತೀಶ್, ನಿರ್ದೇಶಕರಾದ ಹೆಚ್.ಬಿ. ದೇವರಾಜ್, ಎಸ್.ವಿ. ಮಹೇಂದ್ರ, ಎಸ್.ಹೆಚ್. ನಿರಂಜನ, ವಿಜಯಕುಮಾರ್, ಜಿ.ಬಿ. ಕೋಮಲ ಪಾಟೀಲ್, ಕೆ ಹನುಮಂತಪ್ಪ, ಎಸ್. ಸುರೇಶ, ಪಿ. ಪಾರ್ವತಮ್ಮ, ಪ್ರಶಾಂತ ಮಾದಪ್ಪರ, ಕ್ಷೇತ್ರಧಿಕಾರಿ ಪಿ. ಮೃತ್ಯುಂಜಯಪ್ಪ, ಕಾರ್ಯದರ್ಶಿ ಗುರುಶಾಂತಯ್ಯ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಚಂದ್ರಶೇಖರ್, ಕಾರ್ಯದರ್ಶಿ ಗದಿಗೆಯ್ಯ ಉಪಸ್ಥಿತರಿದ್ದರು.
Leave a comment