ಶಿಕಾರಿಪುರ ಲೈವ್:
ಪಟ್ಟಣದ ಹುಚ್ಚರಾಯಸ್ವಾಮಿ ದೇವರ ಬ್ರಹ್ಮರಥೋತ್ಸವ ಪ್ರಯುಕ್ತ ಹುಚ್ಚರಾಯಸ್ವಾಮಿ ಕೆರೆಯಲ್ಲಿ ಭಾನುವಾರ ರಾತ್ರಿ ಹುಚ್ಚರಾಯಸ್ವಾಮಿ ದೇವರ ತೆಪ್ಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ತೆಪ್ಪೋತ್ಸವ ಪ್ರಯುಕ್ತ ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ದೇವರ ಉತ್ಸವ ಮೂರ್ತಿಯನ್ನು ಹುಚ್ಚರಾಯಸ್ವಾಮಿ ಕೆರೆಗೆ ಪಲ್ಲಕ್ಕಿ ಮೂಲಕ ಭಕ್ತರು ಹೊತ್ತು ತಂದರು. ನಂತರ ಹುಚ್ಚರಾಯಸ್ವಾಮಿ ದೇವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಪ್ರಭಾರ ತಹಶೀಲ್ದಾರ್ ಮಂಜುಳಾ ಹೆಗಡಾಳ್, ಗ್ರೇಡ್ 2 ತಹಶೀಲ್ದಾರ್ ರವಿಕುಮಾರ್ ಹಾಗೂ ಶಿರಸ್ತೇದಾರ್ ವಿನಯ್ ಎಂ.ಆರಾಧ್ಯ ಚಾಲನೆ ನೀಡಿದರು.
ನಂತರ ಹುಚ್ಚರಾಯಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿದ ತೆಪ್ಪದ ಮೂಲಕ ಹುಚ್ಚರಾಯಸ್ವಾಮಿ ಕೆರೆಯಲ್ಲಿ ಉತ್ಸವ ನಡೆಸಲಾಯಿತು. ಹುಚ್ಚರಾಯಸ್ವಾಮಿ ದೇವರ ಉತ್ಸವ ಮೂರ್ತಿ ತೆಪ್ಪದ ಮೂಲಕ ಕೆರೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಆಕಾಶದಲ್ಲಿ ವಿವಿಧ ಬಣ್ಣ ಮೂಡಿಸುವ ಸಿಡಿಮದ್ದುಗಳನ್ನು ಸಿಡಿಸಿಲಾಯಿತು.
Leave a comment