ಶಿಕಾರಿಪುರ ಲೈವ್: ದೇಶದ ಪ್ರಗತಿಗಾಗಿ ಮೂಲಭೂತ ಕರ್ತವ್ಯವನ್ನು ಪಾಲಿಸಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದು ಬಿ ವೈ ವಿಜಯೇಂದ್ರ ಕರೆ ನೀಡಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ 76ನೆಯ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1950 ಜನವರಿ 26ರಂದು ಸಂವಿಧಾನ ಜಾರಿಗೆ ಬಂದು ದೇಶ ಗಣರಾಜ್ಯವಾದ ಶುಭ ದಿನವಾಗಿದೆ. ಜಗತ್ತಿನ ಅತಿ ದೊಡ್ಡ ಸಂವಿಧಾನ ನಮ್ಮ ಭಾರತದ ಸಂವಿಧಾನವಾಗಿದೆ ಎಂಬುದು ನಾವೆಲ್ಲಾ ಹೆಮ್ಮೆ ಪಡುವ ವಿಷಯವಾಗಿದೆ. ಸಂವಿಧಾನಕ್ಕೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಮ್ಮ ದೇಶ ವಿಕಸಿತ ಭಾರತ ಆಗಿ ಪರಿವರ್ತನೆಯಾಗಲು ಸಂವಿಧಾನ ಭದ್ರ ಬುನಾದಿ ಹಾಕಿದೆ. ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನವನ್ನು ರಚನೆ ಮಾಡಿದ ಎಲ್ಲಾ ಗಣ್ಯರನ್ನು ನಾವು ಸ್ಮರಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂವಿಧಾನದ ಮೂಲಕ ನಮಗೆ ದೊರೆಯುವ ಹಕ್ಕುಗಳನ್ನು ಅನುಭವಿಸಲು ಮಾತ್ರ ಆದ್ಯತೆ ನೀಡದೆ ಹಕ್ಕುಗಳ ಜೊತೆ ನಮ್ಮ ಕರ್ತವ್ಯಗಳನ್ನು ಪಾಲಿಸುವುದನ್ನು ಮರೆಯಬಾರದು. ಶಿಕಾರಿಪುರ ತಾಲ್ಲೂಕು ಸರ್ವ ಜನಾಂಗದ ತೋಟವಾಗಿದೆ. ಎಲ್ಲ ಜಾತಿ,ಧರ್ಮದವರು ಪ್ರೀತಿ ವಿಶ್ವಾಸದಿಂದ ಒಟ್ಟಾಗಿ ಜೀವನ ನಡೆಸುತ್ತಿರುವುದು ಸಂತಸದ ಸಂಗತಿಯಾಗಿದೆ. ತಾಲ್ಲೂಕಿನಲ್ಲಿ ನೀರಾವರಿ, ಆರೋಗ್ಯ,ಶಿಕ್ಷಣ,ವಿದ್ಯುತ್ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಆದ್ಯತೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲೇಶ್. ಬಿ. ಪೂಜಾರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿವಿಧ ಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ , ಮಾಜಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್, ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ ಯೋಗೀಶ್, ಉಪಾಧ್ಯಕ್ಷೆ ರೂಪ ಮಂಜುನಾಥ್, ಸದಸ್ಯರಾದ ಭದ್ರಾಪುರ ಪಾಲಾಕ್ಷ, ಸುನಂದಾ ಮಂಜುನಾಥ್, ಫೈರೋಜಾ ಭಾನು, ಮುಖ್ಯಾಧಿಕಾರಿ ಭರತ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಿರಣ್ ಕುಮಾರ್ ಹರ್ತಿ, ಸಿಪಿಐ ಆರ್.ಆರ್. ಪಾಟೀಲ್, ರುದ್ರೇಶ್, ಪಿಎಸ್ ಐ ಶರತ್, ಬಿಸಿಎಂ ಇಲಾಖೆ ಕಲ್ಯಾಣಾಧಿಕಾರಿ ಉಮೇಶ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಚ್.ಡಿ. ಮಧುಕೇಶ್ವರ್, ಮುಖಂಡರಾದ ಬಿ.ಡಿ. ಭೂಕಾಂತ್, ಎ.ಬಿ. ಸುಧೀರ್, ವಿವಿಧ ಇಲಾಖೆ ಆಧಿಕಾರಿಗಳು ಉಪಸ್ಥಿತರಿದ್ದರು.
Leave a comment