ಶಿಕಾರಿಪುರ ಲೈವ್:
ಸಂವಿಧಾನದ ಆಶಯಕ್ಕೆ ದಕ್ಕೆಯಾಗದಂತೆ ನಾವು ಜೀವನ ನಡೆಸಬೇಕು ಎಂದು ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ
ಜಿ.ಎಸ್. ಶಿವರುದ್ರಪ್ಪ ಸಭಾಂಗಣದಲ್ಲಿ ಗುರುವಾರ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು,ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಜ್ಯಶಾಸ್ತ್ರ ವಿಭಾಗ ಮತ್ತು ಮತದಾರರ ಸಾಕ್ಷರತಾ ಸಂಘ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ “ಸಂವಿಧಾನ ಮತ್ತು ಡಾ.ಬಿ ಆರ್ ಅಂಬೇಡ್ಕರ್ ಹಾಗೂ 79 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಆಯೋಜಿಸಿದ್ದ ತಾಲ್ಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಜನರ ಅಭಿವೃದ್ಧಿಗಾಗಿ ಸಂವಿಧಾನ ರಚನೆ ಮಾಡಿ ಜಾರಿಗೆ ತರಲಾಗಿದೆ. ಸಮಾಜದಲ್ಲಿ ವಾಸಿಸುವ ಮನುಷ್ಯನ ಹಲವು ಸಮಸ್ಯೆಗಳಿಗೆ ಸಂವಿಧಾನ ಪರಿಹಾರವನ್ನು ಒದಗಿಸುತ್ತದೆ. ಸಂವಿಧಾನವನ್ನು ಪ್ರತಿಯೊಬ್ಬರು ಓದಬೇಕು,ಸಂವಿಧಾನ ಪುಸ್ತಕ ನಿಮ್ಮ ಮನೆಯಲ್ಲಿ ಇರಬೇಕು. ದೇಶಕ್ಕಾಗಿ ವಿಶಿಷ್ಟ ಕೊಡುಗೆ ನೀಡುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ನಿಮ್ಮ ಶಕ್ತಿ ಸರಿಯಾದ ಮಾರ್ಗದಲ್ಲಿ ಬಳಕೆಯಾದಾಗ ಉನ್ನತ ವ್ಯಕ್ತಿಗಳಾಗುತ್ತೀರಿ ಎಂದು ಸಲಹೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಿ.ರಮೇಶ್ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಗೆ ಸಂವಿಧಾನದ ಅರಿವಿರಬೇಕು. ಸಂವಿಧಾನ ಪುಸ್ತಕ ಓದಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನದ ಅವಶ್ಯಕತೆ ಇದೆ. ಪದವಿ ಕಾಲೇಜುಗಳಲ್ಲಿ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಂವಿಧಾನ ಬಗ್ಗೆ ಅರಿವು ಮೂಡಿಸಲು ಭಾರತ ಸಂವಿಧಾನವನ್ನು ಪಠ್ಯದಲ್ಲಿ ಸೇರಿಸಿ ಬೋದಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಎಚ್.ಎಸ್. ರಘು ಮಾತನಾಡಿ, ನಮ್ಮ ಸಂವಿಧಾನ ಯಾವುದೇ ಒಂದು ಧರ್ಮ ಹಾಗೂ ಜಾತಿಗೆ ಮಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲ ವರ್ಗದ ಜನರ ಶ್ರೇಯೊಭಿವೃದ್ಧಿಗಾಗಿ ಸಂವಿಧಾನ ರಚಿಸಿ ಜಾರಿಗೆ ತರಲಾಗಿದೆ. ಭಾರತ ಸಂವಿಧಾನ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತದೆ. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅವಕಾಶ ಒದಗಿಸುತ್ತದೆ. ಡಾ.ಬಿ.ಆರ್. ಅಂಬೇಡ್ಮರ್ ಸೇರಿದಂತೆ ಹಲವು ಮಹಾನ್ ನಾಯಕರ ದೂರದೃಷ್ಠಿಯಿಂದ ನಮ್ಮ ದೇಶಕ್ಕೆ ಉತ್ತಮ ಸಂವಿಧಾನ ದೊರೆತಿದೆ. ಈ ಸಂವಿಧಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಬೇಕು ಎಂಬುವ ಉದ್ದೇಶದಿಂದ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಸಂವಿಧಾನ ಪೀಠಿಕೆ ಭೋದಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಕೆ.ಎಸ್. ಹುಚಾಯಪ್ಪ, ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಬಿ. ಪಾಪಯ್ಯ, ಐಕ್ಕೂಎಸಿ.ಸಂಚಾಲಕ ಡಾ.ವಿ.ಹರೀಶ್, ಕಾರ್ಯಕ್ರಮ ಸಂಯೋಜಕರಾದ ರಾಜ್ಯಶಾಸ್ತ್ರ ಮುಖ್ಯಸ್ಥ ಕೆ.ಎಸ್. ರುದ್ರೇಶ್, ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಕಾಂತ್, ಉಪನ್ಯಾಸಕರಾದ ಆರ್. ಮಂಜಪ್ಪ, ಸಕಲೇಶ್ ಹುಲ್ಮಾರ್, ಪ್ರಸನ್ನಕುಮಾರ್, ಸೋಮಶೇಖರ್ ಶಿಮೊಗ್ಗಿ, ಈಶ್ವರ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
Leave a comment