ಶಿಕಾರಿಪುರ ಲೈವ್:
ಆರ್ ಎಸ್ ಎಸ್ ಚಿಂತನೆಗಳನ್ನು ಮನೆಮನೆಗೆ ತಲುಪಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಕರೆ ನೀಡಿದರು.
ಪಟ್ಟಣದಲ್ಲಿ ಭಾನುವಾರ ಆರ್ ಎಸ್ ಎಸ್ ಸಂಘಟನೆಯ ಗೃಹ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದೂತ್ವ ಪ್ರತಿಪಾದನೆಯಲ್ಲಿ ಆರ್ ಎಸ್ ಎಸ್ ಸಂಘಟನೆ ಮಹತ್ವದ ಕಾರ್ಯ ಮಾಡುತ್ತಿದೆ. ಭಾರತ ಮಾತೆಯನ್ನು ಪೂಜಿಸುವ ಕೆಲಸವನ್ನು ಮಾಡಿದೆ. ಆರ್ ಎಸ್ ಎಸ್ ಮೂಲಕ ನಾವು ಭಾರತ ಮಾತೆಯ ಸೇವೆ ಮಾಡಬೇಕು ಹಾಗೂ ಆರ್ ಎಸ್ ಎಸ್ ಸಂಘಟನೆ ಬೆಂಬಲಿಸಬೇಕು. ಪಕ್ಷಾತೀತವಾಗಿ ಆರ್ ಎಸ್ ಎಸ್ ಕೆಲಸ ಮಾಡುವ ಮೂಲಕ ಶತಮಾನೋತ್ಸವ ಆಚರಿಸುತ್ತಿದೆ. ರಾಷ್ಟ್ರೀಯ ಚಿಂತನೆಗಳನ್ನು ಅಳವಡಿಸಿಕೊಂಡು ಸ್ವಯಂ ಸೇವಕರು ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಈ ಗೃಹ ಸಂಪರ್ಕ ಅಭಿಯಾನ ಮೂಲಕ ಆರ್ ಎಸ್ ಎಸ್ ವಿಚಾರಗಳನ್ನು ಹಾಗೂ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಯಶಸ್ವಿ ಮಾಡಬೇಕು ಎಂದು ಕರೆ ನೀಡಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿ, ಆರ್ ಎಸ್ ಎಸ್ ರಿಜಿಸ್ಟರ್ ಮಾಡಿದ ಸಂಸ್ಥೆಯಲ್ಲ,ಆದರೆ ಒಂದು ವ್ಯವಸ್ಥೆ ಅಡಿ ದೇಶದ ಜನರಲ್ಲಿ ದೇಶಾಭಿಮಾನ ಮೂಡಿಸುವ ಸಂಸ್ಥೆಯಾಗಿದೆ. ಸಾರ್ವಜನಿಕರಿಂದ ಆರ್ ಎಸ್ ಎಸ್ ವಂತಿಗೆ ಸಂಗ್ರಹಿಸುವುದಿಲ್ಲ,ಸಂಘದ ಹಿತೈಷಿಗಳಿಂದ ಗುರುದಕ್ಷಿಣೆ ಪಡೆಯುತ್ತದೆ. ಗುರು ದಕ್ಷಿಣೆ ಬಗ್ಗೆ ಯಾವುದೇ ರಶೀದಿ,ಲೆಕ್ಕ ಬುಕ್ ಇಡುವುದಿಲ್ಲ. ಅರ್ ಎಸ್ ಎಸ್ ಸಂಘಟನೆ ವಂತಿಗೆ ಸಂಗ್ರಹಿಸುತ್ತದೆ ಎಂದು ಹೇಳುವ ವಿರೋಧಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.ವಿರೋಧಿಗಳ ಮನೆಗೂ ಸಂಘದ ಸ್ವಯಂ ಸೇವಕರು ಹೋಗಿ ಪ್ರಚಾರ ಮಾಡುತ್ತಾರೆ ಎಂದರು.
ಅರ್ ಎಸ್ ಎಸ್ ಹಿರಿಯ ಮುಖಂಡ ಎಸ್.ಬಿ. ಮಠದ್ ಮಾತನಾಡಿ, ದೇಶದಲ್ಲಿ ಅರ್ ಎಸ್ ಎಸ್ ಹಿಂದೂತ್ವ ಪ್ರತಿಪಾದಿಸುವ ಮೂಲಕ ಕೋಟ್ಯಾಂತರ ಸ್ವಯಂ ಸೇವಕರನ್ನು ಹೊಂದಿದೆ. ಆದರೂ ಅರ್ ಎಸ್ ಎಸ್ ಬೆಂಬಲಿಸುವವರ ಸಂಖ್ಯೆ ಹೆಚ್ಚಾಗಬೇಕು ಎಂದರು.
ತಾಲೂಕು ವ್ಯವಸ್ಥ ಪ್ರಮುಖ್ ವೀರಣ್ಣ, ತಾಲೂಕು ಬೌದ್ಧಿಕ್ ಪ್ರಮುಖ್ ಶರತ್, ನಗರ ಕಾರ್ಯವಾಹ ಉಮೇಶ್, ಹಿರಿಯ ಸ್ವಯಂ ಸೇವಕ ವಿಶ್ವನಾಥ್, ಬಿಜೆಪಿ ಮುಖಂಡರಾದ ಬಿ.ಡಿ. ಭೂಕಾಂತ್, ಗುರುರಾಜ್ ಜಗತಾಪ್, ಮಂಜುನಾಥ್ ಸಿಂಗ್, ಎಸ್.ಎಸ್. ರಾಘವೇಂದ್ರ, ಎ.ಬಿ. ಸುಧೀರ್, ವೀರನಗೌಡ, ಯೋಗೀಶ್ ಮಡ್ಡಿ, ಹಳ್ಳೆಣ್ಣೆ ಗಿರೀಶ್, ಮೊಟ್ಟೇರ್ ಗಿಡ್ಡಪ್ಪ, ರಾಜು, ರಾಜಶೇಖರ್, ದೇವರಾಜ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
Leave a comment