ಶಿಕಾರಿಪುರ ಲೈವ್:
ಏತನೀರಾವರಿ ಯೋಜನೆ ಮೂಲಕ ತಾಲೂಕಿನ ಉಡುಗುಣಿ,ತಾಳಗುಂದ,ಹೊಸೂರು ಹಾಗೂ ಕಸಬಾ ಹೋಬಳಿಗಳ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೀರಾವರಿ ಇಲಾಖೆ ಕಚೇರಿ ಹೊಂದಿರುವ ಆಡಳಿತ ಸೌಧ ಮುಂಭಾಗ ರೈತರು ಪ್ರತಿಭಟನೆ ನಡೆಸಿ ನೀರಾವರಿ ಇಲಾಖೆ ಇಂಜಿನಿಯರ್ ಬಾಲರಾಜ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಪ್ಯಾಟಿ ಈರಪ್ಪ, ತಾಲೂಕಿನ ಉಡುಗುಣಿ,ತಾಳಗುಂದ,ಹೊಸೂರು ಹಾಗೂ ಕಸಬಾ ಹೋಬಳಿಗಳ ಕೆರೆಗಳಲ್ಲಿ ಬಿಸಿಲಿನ ತಾಪಕ್ಕೆ ನೀರು ಇಂಗಿ ಹೋಗಿ,ಕೆರೆಗಳು ಖಾಲಿಯಾಗುತ್ತಿವೆ. ಅಂತರ್ಜಲ ಪ್ರಮಾಣ ಕಡಿಮೆಯಾದ ಹಿನ್ನೆಲೆ ರೈತರ ಬೋರ್ ವೆಲ್ ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ರೈತರು ಆತಂಕದಲ್ಲಿದ್ದಾರೆ. ಜಿಲ್ಲೆಯ ಜಲಾಶಯಗಳಲ್ಲಿ ನೀರಿದ್ದು, ಈ ನೀರನ್ನು ಏತನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ಹರಿಸಬೇಕು. ಮುಂದಿನ ಹದಿನೈದು ದಿನದಲ್ಲಿ ಕೆರೆ ತುಂಬಿಸದಿದ್ದರೆ,ರಾಜ್ಯ ನಾಯಕರನ್ನು ಕರೆಸಿ ನೀರಾವರಿ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಕಾರ್ಯಾಧ್ಯಕ್ಷ ಪುಟ್ಟಣ್ಣಗೌಡ್ರು, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಣ್ಣ, ಉಪಾಧ್ಯಕ್ಷ ಪ್ರದೀಪ್, ಪದಾಧಿಕಾರಿಗಳಾದ ವೀರೇಶ್, ಹನುಮಂತರಾವ್ , ಶಿವಯೋಗಿ, ರಾಜು, ಯೋಗೀಶ್, ಸಂತೋಷ್, ಬಸವರಾಜ್, ಮಹೇಶಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Leave a comment