ಶಿಕಾರಿಪುರ ಲೈವ್:
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗುರುವಾರ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ತಾಲೂಕು ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ರೈತರ ಪಾಲಿಗೆ ಕಾಂಗ್ರೆಸ್ ಸರ್ಕಾರ ಬದುಕಿದ್ದು ಸತ್ತಾಗೆ ಆಗಿದೆ. ರಾಜ್ಯದ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹಾಗೂ ಸಚಿವರು ರಾಜ್ಯ ಸುತ್ತಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡದೇ ಮುಖ್ಯಮಂತ್ರಿ ಕುರ್ಚಿಗಾಗಿ ದೆಹಲಿಗೆ ಪದೇ ಪದೇ ಹೋಗುವ ಮೂಲಕ ಕಾಲ ಕಳೆಯುತ್ತಿದ್ದಾರೆ. ರಾಜ್ಯದ ರೈತರ ಹಾಗೂ ಬಡ ಜನರ ಹಿತ ಕಾಯುವ
ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ. ಭ್ರಷ್ಟಾಚಾರದಲ್ಲಿ ಈ ಸರ್ಕಾರ ಮುಳುಗಿದೆ.
ರೈತರಿಗಾಗಿ ಭತ್ತ ಮತ್ತು ಮೆಕ್ಕೆಜೋಳ ಬೆಂಬಲ ಬೆಲೆ ನೀಡಿ,ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ತಾಲೂಕಿನಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿದ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯವನ್ನು ಅರಣ್ಯಾಧಿಕಾರಿಗಳು ಮಾಡಬಾರದು. ನಾವು ಇದ್ದೇವೆ ಬಗರ್ ಹುಕುಂ ರೈತರು ಆತಂಕ ಪಡಬಾರದು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರನ್ನು ಟೀಕಿಸುತ್ತಿರುವ ಜಿಲ್ಲೆಯ ಉಸ್ತುವಾರಿ ಸಚಿವರ ಕ್ಷೇತ್ರ ಸೊರಬ ಅಭಿವೃದ್ಧಿಯಾಗಿದ್ದು ಯಡಿಯೂರಪ್ಪ ನೀಡಿದ ಅನುದಾನದಿಂದ ಎಂಬುದನ್ನು ಮರೆಯಬಾರದು.ತಾಲೂಕಿನಲ್ಲಿ ಕಾಂಗ್ರೆಸ್ ಪುಡಾರಿಗಳು ತಾಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಜನರ ಕೆಲಸ ಮಾಡಿಕೊಡಲು ಹೋಗುತ್ತಿಲ್ಲ,ತಮ್ಮ ಹೊಟ್ಟೆಪಾಡಿಗಾಗಿ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿ, ರಾಜ್ಯದ ರೈತರಿಗೆ ಅನ್ಯಾಯವಾದಾಗ ಬಿಜೆಪಿ ಹೋರಾಟ ಮಾಡುತ್ತಾ ಬಂದಿದೆ ಅದೇ ರೀತಿ ಇಂದು ರೈತರ ಸಂಕಷ್ಟಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಪಂದಿಸುವಂತೆ ಪ್ರತಿಭಟನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ತಾಲೂಕಿಗೆ ಏನು ಮಾಡಿಲ್ಲ. ತಾಲೂಕಿನ ಕಾಮಗಾರಿಗಳಿಗೆ ಅನುದಾನ ತರುವ ಕಾರ್ಯವನ್ನು ಕಾಂಗ್ರೆಸ್ ಮುಖಂಡರು ಮಾಡಿಲ್ಲ. ಈ ತಾಲೂಕಿನ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅನುದಾನ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಪ್ರತಿಭಟನಾ ಸಭೆಗೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎತ್ತಿನ ಬಂಡಿಯಲ್ಲಿ ನಿಂತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು
ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯತ್ರಿದೇವಿ, ತಾಲೂಕು ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಿಂಬೆಗೊಂದಿ ಸಿದ್ದಲಿಂಗಪ್ಪ, ತಾಲೂಕು ಅಧ್ಯಕ್ಷ ಹುಲುಗಿನಕೊಪ್ಪ ಯೋಗೇಶಪ್ಪ, ಮುಖಂಡರಾದ ಕೊಳಗಿ ರೇವಣಪ್ಪ, ಅಂಬಾರಗೊಪ್ಪ ಶೇಖರಪ್ಪ, ಎಂ.ಬಿ. ಚನ್ನವೀರಪ್ಪ, ಮಹೇಶ್ ಹುಲ್ಮಾರ್,
ನಿವೇದಿತಾರಾಜು, ಸುನಂದಾ ಮಂಜುನಾಥ್, ರೇಖಾ ರಾಜಶೇಖರ್, ಚುರ್ಚಿಗುಂಡಿ ಶಶಿಧರ್, ಸತೀಶ್ ತಾಳಗುಂದ, ತೊಗರ್ಸಿ ಸಣ್ಣ ಹನುಮಂತಪ್ಪ, ಗುರು ಜಕ್ಕಿನಕೊಪ್ಪ, ಡಿ.ಎಲ್. ಬಸವರಾಜ್, ಈಸೂರು ಜಗದೀಶ್, ಧಾರಾವಾಡ ಗಿರೀಶ್, ಬಂಗಾರಿ ನಾಯ್ಕ, ಚನ್ನವೀರಶೇಟ್ರು, ಗಣೇಶ್ ನಾಗೀಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
Leave a comment