ಶಿಕಾರಿಪುರ ಲೈವ್ :
ಆಪರೇಷನ್ ಸಿಂಧೂರದ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಅನಗತ್ಯವಾಗಿ ಟೀಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ
ಎಂದು ಸಂಸದರಾದ ಬಿ.ವೈ. ರಾಘವೇಂದ್ರ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಗಾಂಗೆ ಪ್ರವಾಸಕ್ಕೆ ತೆರಳಿದ್ದ 26 ಪ್ರವಾಸಿಗರನ್ನು ಧರ್ಮ ಕೇಳಿ ಪಾಕ್ ಪ್ರಚೋದಿತ ಉಗ್ರರು ಹೆಂಡತಿ,ಮಕ್ಕಳ ಎದುರೇ ಹತ್ಯೆ ಮಾಡಿದ್ದನ್ನು ಇಡೀ ದೇಶವೇ ಖಂಡಿಸಿದೆ. ಅದಕ್ಕೆ ಪ್ರತೀಕಾರವಾಗಿ ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ ಉಗ್ರರ ವಿರುದ್ದ ಆಪರೇಷನ್ ಸಿಂಧೂರ ಮೂಲಕ ಉಗ್ರರಿಗೆ ತಕ್ಕ ಪಾಠ ಕಲಿಸಲಾಯಿತು. ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ 9 ನೆಲೆಗಳನ್ನು ನಾಶ ಮಾಡಿ,ಸುಮಾರು ನೂರಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿ ಬಂದ ನಮ್ಮ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡುವದು ಸರಿಯಲ್ಲ ಎಂದರು.
ಉಗ್ರರ ವಿರುಧ್ದ ಪ್ರತೀಕಾರಕ್ಕೆ ಸಿದ್ದವಾದಾಗ ಮುಖ್ಯಮಂತ್ರಿ ಸಿದ್ರಾಮಯ್ಯನವರು ಯುದ್ದಬೇಡ ಎಂದು ಹೇಳಿ ಪಾಕಿಸ್ತಾನದಲ್ಲಿ ಹೀರೋ ಆದರು. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಸಚಿವರಾದ , ಸಂತೋಷ್ ಲಾಡ್ ,ಪ್ರಿಯಾಂಕ ಖರ್ಗೆ ಆಪರೇಷನ್ ಸಿಂಧೂರದ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡಿದರು. ಇಂತಹ ಸಂಕಷ್ಟ ಸಮಯದಲ್ಲಿ ಎಲ್ಲರೂ ಜಾತಿ ಧರ್ಮ ಪಕ್ಷ ಭೇಧ ಮರೆತು ಒಂದಾಗಿ ಶತೃಗಳ ವಿರುದ್ಧ ಹೋರಾಡಬೇಕು. ಅದನ್ನು ಬಿಟ್ಟು ಇಲ್ಲ ಸಲ್ಲದ ಟೀಕೆಗಳನ್ನು ಮಾಡುವದು ಸರಿಯಲ್ಲ. ಮೋದಿಯವರನ್ನು ವಿರೋಧಿಸುವ ಭರದಲ್ಲಿ ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು. ಸೈನಿಕರ ಜಾತಿ ಧರ್ಮ ಹಿಡಿದು ಯಾರೂ ಮಾತನಾಡಬಾರದು ಅದು ಯಾವ ಪಕ್ಷದವರೇ ಆಗಲಿ ಅದು ಅವರಿಗೆ ಶೋಭೆ ತರುವದಿಲ್ಲ. ನಮ್ಮ ಮಾತುಗಳು ಯಾವತ್ತೂ ಸೈನಿಕರಿಗೆ ಸ್ಪೂರ್ತಿಯಾಗಬೇಕು ಎಂದರು.
ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ಮಾಜಿ ಅಧ್ಯಕ್ಷ ಕೆ. ಜಿ. ವಸಂತಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಡಿಸಿಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಎಂ.ಬಿ ಚನ್ನವೀರಪ್ಪ , ನಿರ್ದೇಶಕ ಡಿ.ಎಲ್.ಬಸವರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಬಿ. ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.
Leave a comment