ಶಿಕಾರಿಪುರ ಲೈವ್:
ಮೊಹರಂ ಹಬ್ಬವನ್ನು ಭಾನುವಾರ ಪಟ್ಟಣದಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಶ್ರದ್ಧಾ,ಭಕ್ತಿಯಿಂದ ಆಚರಿಸಿದರು.
ಪಟ್ಟಣದ ಹಲವು ಬಡಾವಣೆಗಳಲ್ಲಿ ಕೆಲವು ದಿನಗಳಿಂದ ಅಲಾಬಿ(ಪಂಜಾ)ದೇವರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದ ಬಾಂಧವರು,ಭಾನುವಾರ ನಗರದ ಪ್ರಮುಖ ಬೀದಿಗಳಲ್ಲಿ ತಮಟೆ,ಬ್ಯಾಂಡ್‌ಸೆಟ್ ಸೇರಿದಂತೆ ವಿವಿಧ ವಾದ್ಯದೊಂದಿಗೆ ಹೂಗಳಿಂದ ಸಿಂಗರಿಸಿದ್ದ ಅಲಾಬಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಿದರು.
ಪುಟಾಣಿ ಮಕ್ಕಳು ಹಾಗೂ ಯುವಕರು ಹರ್ಷದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹರಕೆ ಹೊತ್ತ ಭಕ್ತರ ಮನೆಯ ಬಾಗಿಲಿಗೆ ಅಲಾಬಿ ದೇವರ ಉತ್ಸವ ಮೂರ್ತಿಯನ್ನು ಕೊಂಡೊಯ್ಯುವ ಮೂಲಕ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಕೆಲವು ಬೀದಿಗಳಲ್ಲಿ ಅಲಾಬಿ ದೇವರ ಉತ್ಸವ ಮೂರ್ತಿ ಮೆರವಣಿಗೆ ಆಗಮಿಸಿದಾಗ ಹಿಂದೂ,ಮುಸ್ಲಿಂ ಭೇದ ಭಾವ ಇಲ್ಲದೇ,ಭಕ್ತರು ಉತ್ಸವ ಮೂರ್ತಿ ಹೊತ್ತ ಜನರ ಪಾದಕ್ಕೆ ನೀರು ಹಾಕಿ ಸ್ವಾಗತಿಸಿ ದೇವರಿಗೆ ಪೂಜೆ ಸಲ್ಲಿಸಿದರು.
ಹರಕೆ ಹೊತ್ತವರು ಹಾಗೂ ಸಾರ್ವಜನಿಕರು ಅಲಾಬಿ ದೇವರ ಉತ್ಸವ ಮೂರ್ತಿಗೆ ಸಕ್ಕರೆ ಹಾಗೂ ಮೆಣಸಿನಕಾಳು ಅರ್ಪಿಸಿ ಪೂಜೆ ಸಲ್ಲಿಸಿದರೆ,ಕೆಲವು ಬಡಾವಣೆಗಳಲ್ಲಿ ಅಲಾಬಿ ದೇವರ ಉತ್ಸವ ಮೂರ್ತಿ ಹೊತ್ತ ಹಿರಿಯರು ಹಾಗೂ ಯುವಕರು ಅಗ್ನಿ(ಕೆಂಡ)ಯನ್ನು ತುಳಿದು ಭಕ್ತಿ ಸಮರ್ಪಿಸಿದರು.
ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಬಿ ದೇವರ ಉತ್ಸವ ಮೂರ್ತಿಗಳನ್ನು ಸಂಪ್ರದಾಯದಂತೆ ಯುವಕರು ಪಟ್ಟಣದ ಮಾಸೂರು ಸಕರ್ಲ್ ಬಳಿ ಪ್ರತಿಷ್ಠಾಪಿಸಿದ್ದ ಅಲಾಬಿ ಉತ್ಸವ ಮೂರ್ತಿ ಬಳಿ ಹೊತ್ತು ತಂದು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡ ದೃಶ್ಯ ಕಂಡು ಬಂದಿತು.
Leave a comment