ಶಿಕಾರಿಪುರ ಲೈವ್:
ಅಪರಾಧ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ನೀಡಬೇಕು ಎಂದು ಡಿವೈಎಸ್ ಪಿ ಕೇಶವ್ ಮನವಿ ಮಾಡಿದರು.
ಪಟ್ಟಣದ ಸುರಭಿ ಭವನದಲ್ಲಿ ಸೋಮವಾರ
ಶಿವಮೊಗ್ಗ ಜಿಲ್ಲಾ ಪೊಲೀಸ್ ಶಿಕಾರಿಪುರ ಉಪವಿಭಾಗ ಆಯೋಜಿಸಿದ್ದ ಮನೆ ಮನೆಗೆ ಪೊಲೀಸ್ ಉಪಕ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸರನ್ನು ವಿಲನ್ ಎಂಬಂತೆ ಕೆಲವು ಸಿನಿಮಾಗಳು ತೋರಿಸುತ್ತಿವೆ. ಆದರೆ ಪೊಲೀಸರು ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಪೊಲೀಸರ ಬಗ್ಗೆ ಹೊಂದಿರುವ ಭಯದ ಭಾವನೆ ಬದಲಾಗಬೇಕು. ರಾಜ್ಯ ಸರ್ಕಾರ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ಸ್ನೇಹ ವಿಶ್ವಾಸ ಬೆಳೆಸಿ ಪರಿಣಾಮಕಾರಿಯಾಗಿ ಪೊಲೀಸರು ಕೆಲಸ ಮಾಡುವ ನಿಟ್ಟಿನಲ್ಲಿ ಮನೆ ಮನೆಗೆ ಪೊಲೀಸ್ ಉಪಕ್ರಮ ಕಾರ್ಯಕ್ರಮ ಜಾರಿಗೆ ತಂದಿದೆ. ಜನರ ಸಮಸ್ಯೆ ಬಗೆಹರಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐ ಸಂತೋಷ್ ಪಾಟೀಲ್, ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ, ಸುಗಮ ಸಂಚಾರ, ಅಪರಾಧ ಪ್ರಕರಣ ಪತ್ತೆ ಹಾಗೂ ತಡೆಗಟ್ಟುವುದು ಹಾಗೂ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿತ್ತು. ಪ್ರಸ್ತುತ ಮನೆ ಮನೆಗೆ ಪೊಲೀಸ್ ಉಪಕ್ರಮ ಕಾರ್ಯಕ್ರಮವನ್ನು ಆಧಿಕೃತವಾಗಿ ಗೃಹಮಂತ್ರಿ ಜಿ.ಪರಮೇಶ್ವರ್ ಅವರು ಜಾರಿಗೆ ತಂದಿದ್ದಾರೆ. ಈ ಕಾರ್ಯಕ್ರಮದ ಮೂಲಕ ಸಕ್ರಿಯ ಪೊಲೀಸ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.
ಪಟ್ಟಣ ಪೊಲೀಸ್ ಠಾಣೆ ಪಿಎಸ್ ಐ ಶರತ್, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ ಐ ಶೋಭಾರಾಣಿ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಡಾ.ಹಾಫೀಜ್ ಕರ್ನಾಟಕಿ, ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಗೋಣಿ ಪ್ರಕಾಶ್, ಪುರಸಭೆ ಸದಸ್ಯ ಭದ್ರಾಪುರ ಫಾಲಾಕ್ಷ, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಬಿ. ಸುಧೀರ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಲಕ್ಷ್ಮಣ್, ಚಂದ್ರಪ್ಪ, ಅಂಗಡಿ ಜಗಧೀಶ್, ಸುಭಾಷ್ ಚಂದ್ರ ಸ್ಥಾನಿಕ್, ಮಧು, ಹದಡಿ ಮಂಜು, ಮತ್ತಿತರರು ಉಪಸ್ಥಿತರಿದ್ದರು.
Leave a comment