ಶಿಕಾರಿಪುರ ಲೈವ್:
ಮಹಿಳೆಯರು ಸಮಾಜ ಮುಖಿಯಾಗಿ ಕೆಲಸ ಮಾಡುವ ಮೂಲಕ ಸಮಾಜಕ್ಕಾಗಿ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ನಟಿ ಮಾಳವಿಕಾ ಅವಿನಾಶ್ ಸಲಹೆ ನೀಡಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಹಿಂದೆ ಬಿದ್ದಿಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ತಾವು ಮಾಡುವ ಕೆಲಸದ ಬಗ್ಗೆ ಕೀಳರಿಮೆ ಹೊಂದಬಾರದು. ನಾವು ಗೃಹಿಣಿಯಾಗಿ ಮನೆಯಲ್ಲಿ ಮಾಡುವ ಕೆಲಸಕ್ಕೆ ಮಹತ್ವ ಇದೆ. ಎಂತಹ ಸಂದರ್ಭದಲ್ಲೂ ನಾವು ಕುಗ್ಗದೆ ಧೈರ್ಯದಿಂದ ಜೀವನ ನಡೆಸಬೇಕು. ಗರ್ಭಧಾರಣೆ ಮಾಡಿ ಮಕ್ಕಳಿಗೆ ಜನ್ಮ ನೀಡುವ ದೊಡ್ಡ ಶಕ್ತಿಯನ್ನು ದೇವರು ನಮಗೆ ನೀಡಿದ್ದಾನೆ ಎಂದರು.
ಪ್ರಸ್ತುತ ಸಮಾಜದಲ್ಲಿ ಅವಿಭಾಜ್ಯ ಕುಟುಂಬಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಮಹಿಳೆಯರು ಮಾಡುವ ಕೆಲಸ ಕಡಿಮೆಯಾಗಿಲ್ಲ. ಎಲ್ಲಾ ಕಾಲದಲ್ಲೂ ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾ.ರೆ ಅನುಭವ ಮಂಟಪದಲ್ಲಿ ಶರಣರ ಜೊತೆಯಲ್ಲಿ ಅಕ್ಕಮಹಾದೇವಿ ಸೇರಿದಂತೆ ಹಲವು ಶರಣೆಯರು ಇದ್ದರು. ನರೇಂದ್ರ ಮೋದಿ ಮಹಿಳೆಯರ ಪರವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಿದ್ದರು. ಹೆಣ್ಣು ಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು ಎಂದು ಶ್ಲಾಘಿಸಿದರು.
ಸಂಸದರಾದ ಬಿ.ವೈ. ರಾಘವೇಂದ್ರ ಮಾತನಾಡಿ, ಮಹಿಳೆಯರು ಸಂಸಾರಕ್ಕೆ ಮಾತ್ರ ಸೀಮಿತವಾಗದೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ರಾಷ್ಡ್ರಪತಿಯಾಗಿ,ಸ್ಪೀಕರ್, ಮುಖ್ಯಮಂತ್ರಿಯಾಗಿ, ಸಚಿವರಾಗಿ ರಾಜಕೀಯ ಕ್ಷೇತ್ರದಲ್ಲಿ ಹಾಗೂ ಚಲನಚಿತ್ರ ಸೇವೆ ಸಲ್ಲಿಸಿದ್ದಾರೆ. ಮಹಿಳೆಯರಿಂದ ಧರ್ಮ ಉಳಿದಿದೆ. ಮಕ್ಕಳಿಗೆ ಸರಿದಾರಿ ತೋರಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ನೀಡಿದ್ದು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ವೋಟ್ ಬ್ಯಾಂಕ್ ಬಜೆಟ್ ಆಗಿದೆ ಎಂದು ಟೀಕಿಸಿದರು.
ಇದೇ ಸಂದರ್ಭದಲ್ಲಿ ಮಾಳವಿಕ ಅವಿನಾಶ್ ಸೇರಿದಂತೆ ಮಹಿಳಾ ಮುಖಂಡರನ್ನು ಸಂಸದ ಬಿ ವೈ ರಾಘವೇಂದ್ರ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಪ್ತಸಮಾಲೋಚಕಿ ಕೀರ್ತಿ ಅಂಗಾಂಗ ದಾನ ಕುರಿತು ಮಾಹಿತಿ ನೀಡಿದರು.
ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ ಯೋಗೀಶ್, ಉಪಾಧ್ಯಕ್ಷೆ ರೂಪಾ ಮಂಜುನಾಥ್ ಪಾರಿವಾಳ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿದೇವಿ, ತಾಲೂಕು ಅಧ್ಯಕ್ಷೆ ರೇಖಾರಾಜಶೇಖರ್, ಮಾಜಿ ಅಧ್ಯಕ್ಷೆ ರೂಪಾ, ಕಾರ್ಯದರ್ಶಿ ಜಾಹ್ನವಿ, ಖಜಾಂಚಿ ಶುಭ ರಘು, ಬಿಜೆಪಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಮುಖಂಡರಾದ ಅಂಬಾರಗೊಪ್ಪ ಶೇಖರಪ್ಪ, ಎ.ಬಿ. ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.
Leave a comment