ಶಿಕಾರಿಪುರ ಲೈವ್:
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಸಂಸದ ರಾಘವೇಂದ್ರ ಅವರನ್ನು ಟೀಕಿಸುವ ನೈತಿಕ ಹಕ್ಕು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪಗೆ ಇಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಪುರಸಭೆ ಮಾಜಿ ಸದಸ್ಯ ಹುಲ್ಮಾರ್ ಮಹೇಶ್ ತಿಳಿಸಿದರು.
ಪಟ್ಟಣದ ಸುದ್ದಿಮನೆಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಸದ ರಾಘವೇಂದ್ರ ಅವರು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಕಾಮಗಾರಿಗಳಿಗೆ ಅನುದಾನ ತಂದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ, ಸಿಗಂದೂರು ಸೇತುವೆ, ರೈಲ್ವೆ ಯೋಜನೆ ನೀರಾವರಿ ಯೋಜನೆ ಸೇರಿದಂತೆ ಹಲವು ಯೋಜನೆಗಳು ಸಂಸದ ರಾಘವೇಂದ್ರ ಮಾಡಿದ ಕೆಲಸಕ್ಕೆ ಸಾಕ್ಷಿಯಾಗಿವೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಧು ಬಂಗಾರಪ್ಪ ಎಷ್ಟು ಸಾವಿರ ಕೋಟಿ ರೂಪಾಯಿಗಳನ್ನು ಜಿಲ್ಲೆಯ ಅಭಿವೃದ್ಧಿಗೆ ತಂದಿದ್ದಾರೆ. ಯಾವ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಲಿ ಎಂದು ಪ್ರಶ್ನಿಸಿದರು.
ಸಿಗಂದೂರು ಸೇತುವೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಹಂತಕ್ಕೆ ತಲುಪಿದೆ, ಇದರ ಕೀರ್ತಿ ಯಶಸ್ಸು ಸಂಸದರಾದ ರಾಘವೇಂದ್ರ ಅವರಿಗೆ ಸಲ್ಲುವುದನ್ನು ಸಹಿಸಲಾಗದೆ ಸಚಿವರಾದ ಮಧು ಬಂಗಾರಪ್ಪನವರು ಹಾಗೂ ಶಾಸಕರದ ಗೋಪಾಲಕೃಷ್ಣ ಬೇಳೂರವರು, ವಿನಾಕಾರಣ ರಾಘವೇಂದ್ರ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಯಾವುದೇ ಶಾಸಕರು ಹಾಗೂ ಸಂಸದರು ಯಾರು ಸ್ವಂತ ಖರ್ಚಿನಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಿಲ್ಲ, ಸರ್ಕಾರದಿಂದ ಅನುದಾನವನ್ನು ತಂದೇ ಅಭಿವೃದ್ಧಿಗಳನ್ನು ಮಾಡುವುದು,ಆ ಅನುದಾನವನ್ನು ತರಲು ಇಚ್ಛಾಶಕ್ತಿ ಮತ್ತು ಸಾಮರ್ಥ್ಯ ಬೇಕಾಗುತ್ತದೆ. ಅನುದಾನ ತರುವ ಸಾಮರ್ಥ್ಯ ಸಂಸದ ಬಿ ವೈ ರಾಘವೇಂದ್ರ ಹಾಗೂ ಶಾಸಕರಾದ ವಿಜಯೇಂದ್ರ ಅವರಿಗೆ ಇದೆ. ಸಂಸದ ರಾಘವೇಂದ್ರ ಬಗ್ಗೆ ಮಧುಬಂಗಾರಪ್ಪ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು,ನಿಲ್ಲಿಸದಿದ್ದರೆ
ಅವರಿಗೆ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡರಾದ ರಾಮನಗೌಡ್ರು, ಕೆಂಪಳ್ಳಿ ಗಂಗಾಧರಪ್ಪ, ಮುಗುಳಗೆರೆ ಬೂದ್ಯಪ್ಪ, ಕಾಳೇನಹಳ್ಳಿ ರುದ್ರಪ್ಪ , ರವಿಕುಮಾರ್, ರಾಜಪ್ಪ ಅಮಟೆಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.
Leave a comment