ಶಿಕಾರಿಪುರ ಲೈವ್:
ಕನ್ನಡ ಭಾಷೆ ಉಳಿಸಿ ಬೆಳೆಸುವ ಕರ್ತವ್ಯ ನಮ್ಮೇಲ್ಲರ ಮೇಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.
ತಾಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಯುವಕ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಆಹ್ವಾನಿತ ಪುರುಷ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಾತೃಭಾಷೆ ಕನ್ನಡ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪೈಲ್ವಾನರು ಸೋಲು ಗೆಲುವು ಲೆಕ್ಕೀಸದೇ ಉತ್ತಮ ಪ್ರದರ್ಶನ ನೀಡಬೇಕು. ಗರಡಿ ಮನೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದು,ಶೀಘ್ರದಲ್ಲಿ ಅನುದಾನ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು ಮಾತನಾಡಿ, ಕುಸ್ತಿ ನಮ್ಮ ಗ್ರಾಮೀಣಾ ಕ್ರೀಡೆಯಾಗಿದೆ. ರಾಜ ಮಹಾರಾಜರ ಕಾಲದಿಂದ ಕುಸ್ತಿ ಕ್ರೀಡೆಗೆ ಹಾಗೂ ಪೈಲ್ವಾನರಿಗೆ ಪ್ರೋತ್ಸಾಹ ದೊರೆತಿದೆ. ಶಿಕಾರಿಪುರ ತಾಲೂಕಿನಲ್ಲಿ ಕುಸ್ತಿ ಕ್ರೀಡೆ ಪ್ರಸಿದ್ಧವಾಗಿದೆ. ಕುಸ್ತಿ ಪಂದ್ಯಾವಳಿಯಲ್ಲಿ ಅನೇಕ ಪೈಲ್ವಾನರು ಸಾಧನೆ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಪ್ಪನಹಳ್ಳಿ ಕನ್ನಡ ಯುವಕ ಸಂಘ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ಬು ಆಯೋಜಿಸುತ್ತಾ ಬಂದಿದೆ. ಪ್ರಸ್ತುತ ಕುಸ್ತಿ ಪಂದ್ಯಾವಳಿ ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ. ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಲೋಹಿತ್ ಕುಮಾರ್, ಕನ್ನಡ ಯುವಕ ಸಂಘ ಸಂಸ್ಥಾಪಕ ಎಸ್.ಪಿ. ಮಹೇಶ್ ನಾಯ್ಡು, ಮಾಜಿ ಸೈನಿಕ ಬಸವರಾಜ್, ಮಾರ್ಗದರ್ಶಕ ರವಿಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸುದರ್ಶನ್ ನಾಯ್ಡು, ಮಾಜಿ ಕುಸ್ತಿ ಪೈಲ್ವಾನ್ ಪರಸಪ್ಪ, ಗುರುಮೂರ್ತಿ, ಕಪ್ಪನಹಳ್ಳಿ ಕನ್ನಡ ಯುವಕ ಸಂಘದ ಗೌರವಾಧ್ಯಕ್ಷರಾದ ಸಿ. ರಾಘವೇಂದ್ರ, ಎಚ್. ಲೋಕೇಶ್, ಅಧ್ಯಕ್ಷ ಎಂ.ಬಿ. ರಾಕೇಶ್, ಪದಾಧಿಕಾರಿಗಳು ಉಪಸ್ಥಿತರಿದ್ದರು.
Leave a comment