ಶಿಕಾರಿಪುರ ಲೈವ್ :
ಅಂಜನಾಪುರ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರಾವರಿ ಯೋಜನೆ ಅನುಷ್ಠಾನ ಮಾಡುವುದರಿಂದ ಜಲಾಶಯ ಅಚ್ಚುಕಟ್ಟು ರೈತರಿಗೆ ತೊಂದರೆಯಾಗುವುದಿಲ್ಲ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಸ್ಪಷ್ಟ ಪಡಿಸಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶನಿವಾರ ನಡೆದ ತಾಲ್ಲೂಕು ಪಂಚಾಯಿತಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆವರು ಮಾತನಾಡಿದರು.
ಅಂಜನಾಪುರ ಜಲಾಶಯದಿಂದ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ನೀಡಲಾಗುತ್ತಿದೆ. ಆದರೆ ಗ್ರಾಮಗಳಿಗೂ ಈ ಜಲಾಶಯ ನೀರನ್ನು ನೀಡುವುದರಿಂದ ಅಚ್ಚುಕಟ್ಟು ರೈತರ ಕೃಷಿ ಚಟುವಟಿಕಗೆ ನೀರು ಕಡಿಮೆಯಾಗಲಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ. ನಾಗರಾಜಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಮಾತಿಗೆ ಪ್ರತಿಕ್ರಿಯಿಸಿದ ಸಂಸದ ಬಿ.ವೈ. ರಾಘವೇಂದ್ರ, ಅಂಜನಾಪುರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಮಾತ್ರ ಶಿಕಾರಿಪುರ,ಶಿರಾಳಕೊಪ್ಪ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಳಸಿಕೊಳ್ಳಲಾಗುತ್ತದೆ. ಈ ನೀರನ್ನು ಮಾತ್ರ ಬಳಸಿಕೊಳ್ಳುವುದರಿಂದ ಅಚ್ಚುಕಟ್ಟು ರೈತರಿಗೆ ಕೃಷಿ ಚಟುವಟಿಕೆಗೆ ನೀರಿನ ಕೊರತೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ಬೇಸಿಗೆ ಕಾಲ ಆರಂಭವಾಗಿದ್ದು ಸಮರ್ಪಕವಾಗಿ ತಾಲ್ಲೂಕಿನ ಜನತೆಗೆ ಕುಡಿಯುವ ನೀರು ಒದಗಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗೆ ಸ್ಪಂದಿಸಬೇಕು. ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ ಮಾತನಾಡಿ, ಕೆ ಎಸ್ ಎಫ್ ಸಿ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಊಟಕ್ಕಾಗಿ ಕೊಡುವ ಗೋಧಿ ಅಕ್ಕಿಯನ್ನು ಅಧಿಕಾರಿಗಳು ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಸಿಎಂ ಕಲ್ಯಾಣಾಧಿಕಾರಿ ಉಮೇಶ್, ವಿದ್ಯಾರ್ಥಿ ನಿಲಯಕ್ಕೆ ನೀಡುತ್ತಿರುವ ಗೋಧಿ ಅಕ್ಕಿಯನ್ನು ಅಧಿಕಾರಿಗಳು ಮಾರಿಕೊಳ್ಳುತ್ತಿಲ್ಲ. ಒಂದು ವಿದ್ಯಾರ್ಥಿ ನಿಲಯದಲ್ಲಿ ಕಡಿಮೆಯಾದಾಗ ಇನ್ನೊಂದು ವಿದ್ಯಾರ್ಥಿ ನಿಲಯದಿಂದ ಗೋಧಿ ಅಕ್ಕಿ ಕೊಂಡೊಯ್ಯುಲಾಗುತ್ತದೆ. ಆದರೆ ಯಾವ ವಾರ್ಡನ್ ಗಳು ಮಾರಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಕೆಡಿಪಿ ಸದಸ್ಯ ಉಮೇಶ್ ಮಾರವಳ್ಳಿ ಮಾತನಾಡಿ, ತಾಲೂಕು ಆಡಳಿತ ಪಿಂಚಣಿ ಅದಾಲತ್ ಕಾರ್ಯಕ್ರಮ ಮಾಡಿಲ್ಲ. ಕಂದಾಯ ಗ್ರಾಮ ಘೋಷಣೆ ಬಗ್ಗೆ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.
ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಸಮಯಕ್ಕೆ ಸರಿಯಾಗಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ನಡೆಸಲಾಗಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ನಡೆಸಲಾಗಿದೆ ಕಂದಾಯ ಗ್ರಾಮಗಳ ಘೋಷಣೆ ಬಗ್ಗೆ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ಅಂಕಿ ಅಂಶ ನೀಡಿದರು.
ಎಸ್.ಪಿ. ನಾಗರಾಜಗೌಡ ಹಾಗೂ ರಾಘುನಾಯ್ಕ ಮಾತನಾಡಿ, ಅಡಿಕೆ ಬೆಳೆಯನ್ನು ಕಾಡು ಹಂದಿಗಳು ಹಾಳು ಮಾಡುತ್ತಿವೆ. ಹಂದಿಗಳನ್ನು ನಿಯಂತ್ರಿಸಲು ಅರಣ್ಯಾಧಿಕಾರಿಗಳು ಗಮನ ಹರಿಸಬೇಕು. ಅಡಿಕೆ ಬೆಳೆಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಮಾತಿಗೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರನಾಯ್ಕ್, ಖಾತೆ ಇರುವ ಕೃಷಿ ಭೂಮಿಯಲ್ಲಿ ಬೆಳೆದ ಅಡಿಕೆ ಬೆಳೆಗೆ ಮಾತ್ರ ಪರಿಹಾರ ಇದೆ.ಆದರೆ ಕಾನೂನಿನ ಪ್ರಕಾರ ಅರಣ್ಯ ಭೂಮಿ ಹಾಗೂ ಬಗರ್ ಹುಕುಂ ಭೂಮಿಗೆ ಬೆಳೆಗೆ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ. ರೈತರು ಹಂದಿಗಳಿಂದ ಬೆಳೆಯನ್ನು ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು. ಅರಣ್ಯ ಇಲಾಖೆ ಕೂಡ ಹಂದಿ ನಿಯಂತ್ರಿಸಲು ಕ್ರಮಕೈಗೊಳ್ಳಲಿದೆ ಎಂದರು.
ತಾಲ್ಲೂಕಿನಲ್ಲಿ ಏತನೀರಾವರಿ ಯೋಜನೆ ಅಡಿ ಇರುವ ಕೆರೆಗಳ ಬಾಕಿ ಇರುವ ಕಾಮಗಾರಿಯನ್ನು ಮುಗಿಸಲು ಆದ್ಯತೆ ನೀಡಬೇಕು ಎಂದು ನೀರಾವರಿ ಇಲಾಖೆ ಎಂಜಿನಿಯರ್ ಬಾಲರಾಜ್ ಆವರಿಗೆ ಶಾಸಕ ವಿಜಯೇಂದ್ರ ಹಾಗೂ ಸಂಸದ ರಾಘವೇಂದ್ರ ಸೂಚಿಸಿದರು.
ಟಎಪಿಸಿಎಂಎಸ್ ಅಧ್ಯಕ್ಷ ಎ.ಬಿ. ಸುಧೀರ್ ಮಾತನಾಡಿ. ಪಟ್ಟಣದಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದ್ದು ಬೀದಿನಾಯಿ ನಿಯಂತ್ರಿಸಲು ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಭರತ್ ಪ್ರತಿಕ್ರಿಯಿಸಿ, ಬೀದಿನಾಯಿ ಹಿಡಿದು ಸಂತಾನ ಹರಣ ಚಿಕಿತ್ಸೆ ನಡೆಸಲು ಟೆಂಡರ್ ಕರೆಯಲಾಗಿದೆ ಎಂದರು.
ತಾಲೂಕು ಪಂಚಾಯಿತಿ ಇಒ ನಾಗರಾಜ್, ಕೆಡಿಪಿ ಸದಸ್ಯರಾದ ಕೆ.ಎಸ್. ವೀರನಗೌಡ, ಮಂಜಪ್ಪ, ಅಜೀಜ್ ಖಾನ್, ಪುಷ್ಪಾ, ಮತ್ತಿಕೋಟೆ ರವಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದೂದಿಹಳ್ಳಿ ಬಸವರಾಜ್, ಎಸ್.ಪಿ. ಚಂದ್ರೇಗೌಡ, ,ಎಚ್.ಎಸ್. ರವೀಂದ್ರ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಲೋಹಿತ್ ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Leave a comment