ಶಿಕಾರಿಪುರ ಲೈವ್:
ವಚನ ಸಾಹಿತ್ಯದ ಓದು ಮನುಷ್ಯನ ಆಲೋಚನಾ ಶಕ್ತಿಯನ್ನು ಬೆಳೆಸುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ.ಸೋಮಶೇಖರ್ ಶಿಮೊಗ್ಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ,
ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಕನ್ನಡ ಭಾಷಾ ವೇದಿಕೆ ಹಾಗೂ ಸುರಭಿ ಬಳಗ ಆಶ್ರಯದಲ್ಲಿ ನಡೆದ
ಕಾನೂರು ನಾಗಪ್ಪ-ಹೇಮಲತಾ ದತ್ತಿ ಹಾಗೂ
ಸುರಭಿ ಬಳಗದ ಸಾಹಿತ್ಯ ಸಂಸ್ಕೃತಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿಯ ವಚನ ಸಾಹಿತ್ಯ ಕುರಿತು ಅವರ ಮಾತನಾಡಿದರು.
ಎಲ್ಲರನ್ನು ಸಮಾನವಾಗಿ ಕಾಣುವ ತತ್ವವನ್ನು ಬಸವಣ್ಣನವರು ಸಾರಿದ್ದರು. ಮಠದ ಸಂಸ್ಕೃತಿಯನ್ನು ಬೇಡ ಎಂದಿದ್ದ ಅವರು, ಜಾತಿ ಧರ್ಮದ ಹೆಸರಿನಲ್ಲಿ ಮಠಗಳನ್ನು ಕಟ್ಟುವ ಬಗ್ಗೆ ಪ್ರಶ್ನಿಸಿದ್ದರು. ಕಾಯಕ ತತ್ವವನ್ನು ಪ್ರತಿಪಾದಿಸಿದವರು ಕಾಯಕದ ಮೂಲಕ ದೇವರನ್ನು ಕಾಣಬೇಕು ಎಂದಿದ್ದರು. ಬಸವಣ್ಣ ಅಕ್ಕಮಹಾದೇವಿ ಸೇರಿದಂತೆ ಹಲವು ಶರಣರು ಸಮಾನತೆಯ ತತ್ವವನ್ನು ಸಾರಿದ್ದರು. 12ನೇ ಶತಮಾನದ ವಚನ ಸಾಹಿತ್ಯದ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ.ಶರಣರ ತತ್ವ ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕುಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ ಕೆ.ಸಿ. ರವೀಂದ್ರ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಹೆಚ್ಚು ಜ್ಞಾನಪೀಠ ಪ್ರಶಸ್ತಿ ಕನ್ನಡ ಭಾಷೆಗೆ ದೊರೆತಿದೆ. ನಮ್ಮ ಅಭಿವ್ಯಕ್ತವನ್ನು ನಮ್ಮ ಭಾವನೆಯನ್ನು ವ್ಯಕ್ತಪಡಿಸಲು ಮಾತೃಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಭಾಷೆ ಕಲಿಯಿರಿ ಆದರೆ ಮಾತೃಭಾಷೆ ಮಾತೃಭಾಷೆ ಕನ್ನಡವನ್ನು ಮರೆಯಬಾರದು. ಕನ್ನಡ ಭಾಷೆ ಉಳಿಸಲು ಕನ್ನಡ ಭಾಷೆಯನ್ನು ಬೆಳೆಸಬೇಕು ಪ್ರತಿಯೊಬ್ಬರೂ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತ್ಯ ಕ್ಷೇತ್ರಕ್ಕೆ ಶಿಕಾರಿಪುರ ತಾಲೂಕಿನ ಕೊಡುಗೆ ವಿಷಯ ಕುರಿತು ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಹಾಗೂ ಉಪನ್ಯಾಸಕ ಎ.ಬಿ. ಸುಧೀರ್, ವಚನಸಾಹಿತ್ಯಕ್ಕೆ ಕೊಡುಗೆ ನೀಡಿದ ಅಕ್ಕಮಹಾದೇವಿ, ಅಲ್ಲಮಪ್ರಭು,ಸತ್ಯಕ್ಕ ಹಾಗೂ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ತಾಲೂಕಿನಲ್ಲಿ ಜನಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ತಾಲೂಕಿನಲ್ಲಿ ಒಂದು ಕಲ್ಲು ಎಡವಿದರೂ ಅದು ಶಾಸನವಾಗಿರುತ್ತದೆ. ಹಲ್ಮಿಡಿ ಶಾಸನಕ್ಕಿಂತ ಪುರಾತನ ಕನ್ನಡ ಶಾಸನ ಸಿಂಹಕಟಾಂಜನ ಶಾಸನ ತಾಲೂಕಿನ ತಾಳಗುಂದ ಗ್ರಾಮದಲ್ಲಿ ದೊರೆತಿದ್ದು,ಮೊದಲ ಶಾಸನ ಎಂದು ಘೋಷಣೆ ಮಾಡಲು ಸಂಶೋಧನೆ ನಡೆಯುತ್ತಿದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಎಸ್. ರಘು ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್. ಹುಚ್ರಾಯಪ್ಪ. ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಬಿ. ಪಾಪಯ್ಯ, ದತ್ತಿದಾನಿ ಹಾಗೂ ಸುರಭಿ ಬಳಗ ಅಧ್ಯಕ್ಷ ಮೃತ್ಯುಂಜಯ, ಉಪಾಧ್ಯಕ್ಷ ಯು.ಎಸ್. ರುದ್ರಯ್ಯ,
ಉಮೇಶ್, ಈರಣ್ಣ, ದತ್ತಿ ಕಾರ್ಯಕ್ರಮ ಸಂಚಾಲಕ ಹಾಗೂ ಕನ್ನಡ ವಿಭಾಗ ಮುಖ್ಯಸ್ಥ ಕೋಟೋಜಿರಾವ್, ಉಪನ್ಯಾಸಕರು ಉಪಸ್ಥಿತರಿದ್ದರು.
Leave a comment