ಶಿಕಾರಿಪುರದ ಲೈವ್:
ತಾಲ್ಲೂಕಿನ ಈಸೂರು ಗ್ರಾಮದಿಂದ ಅಂಜನಾಪುರ ಗ್ರಾಮದ ಕೆಪಿಟಿಸಿಎಲ್ ಗ್ರೀಡ್ ವರೆಗೆ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಗೆ ಚಿಕ್ಕಜೋಗಿಹಳ್ಳಿ,ಈಸೂರು,ಚುರ್ಚಿಗುಂಡಿ ಹಾಗೂ ಕೊರಲಹಳ್ಳಿ ಗ್ರಾಮದ ರೈತರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಗುರುದತ್ತ ಹೆಗಡೆ ಶುಕ್ರವಾರ ವಿದ್ಯುತ್ ಮಾರ್ಗ ನಿರ್ಮಾಣ ಸ್ಥಳವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ ರೈತರು, ಈಸೂರಿನಿಂದ ಅಂಜನಾಪುರ ಕೆಪಿಟಿಸಿಎಲ್ ಗ್ರೀಡ್ ವರೆಗೆ ವಿದ್ಯುತ್ ಮಾರ್ಗದ ನಿರ್ಮಾಣ ಮಾಡಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ. ಕೇವಲ 4ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಬಹುದಾದ ವಿದ್ಯುತ್ ಮಾರ್ಗವನ್ನು13 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕೊಂಡೊಯ್ಯಲು ಕಾಮಗಾರಿ ನಡೆಸಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ. ಈ ವಿದ್ಯುತ್ ಮಾರ್ಗ ನಿರ್ಮಾಣದಿಂದ ಅಡಿಕೆ ಬೆಳೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದ ರೈತರ ಭೂಮಿಗೆ ತೊಂದರೆಯಾಗಲಿದೆ. ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿ ನಡೆಸಬಾರದು. ಸಾಧ್ಯವಾದರೆ ಬದಲಿ ವಿದ್ಯುತ್ ಮಾರ್ಗ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಮಾರ್ಗ ನಿರ್ಮಾಣ ಸ್ಥಳ ವೀಕ್ಷಣೆ ಮಾಡಿದ ನಂತರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಗುರುದತ್ತ ಹೆಗಡೆ ರೈತರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ. ನಾಗರಾಜ್ ಗೌಡ ಮಾತನಾಡಿ, ಪ್ರಸ್ತುತ ನೀಲನಕ್ಷೆಯಂತೆ ವಿದ್ಯುತ್ ಮಾರ್ಗ ನಿರ್ಮಾಣ ಮಾಡುವುದರಿಂದ ರೈತರ ಭೂಮಿಗೆ ತೊಂದರೆಯಾಗಲಿದೆ. ಆದ್ದರಿಂದ ಬದಲಿ ಮಾರ್ಗದಲ್ಲಿ ವಿದ್ಯುತ್ ಮಾರ್ಗ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಗುರುದತ್ತ ಹೆಗಡೆ ಮಾತನಾಡಿ, ಬದಲಿ ವಿದ್ಯುತ್ ಮಾರ್ಗ ನಿರ್ಮಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈತರು ಸೂಚಿಸಿದ ಭೂಮಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ. ಭೂಮಿಗಾಗಿ ಕೇಂದ್ರದ ಆನುಮತಿಗೆ ವರದಿ ಕಳಿಸಬೇಕಾಗುತ್ತದೆ. ಅನುಮತಿ ಪಡೆಯಲು ಕನಿಷ್ಠ ಮೂರರಿಂದ ಐದು ವರ್ಷ ಸಮಯ ತೆಗೆದುಕೊಳ್ಳುತ್ತದೆ. ರೈತರು ಸಲಹೆ ನೀಡಿದಂತೆ ಕೆರೆಯಲ್ಲಿ ವಿದ್ಯುತ್ ಮಾರ್ಗ ಕೊಂಡೊಯ್ಯಲು ಸಾಧ್ಯವಿಲ್ಲ ಕೆರೆಯಲ್ಲಿ ಕಾಮಗಾರಿ ನಡೆಸಲು ಸುಪ್ರೀಂ ಕೋರ್ಟ್ ಆದೇಶದಂತೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಆವಕಾಶ ನೀಡುವುದಿಲ್ಲ. ಆದರೆ ಅರಣ್ಯ ಇಲಾಖೆ ಜತೆ ಮಾತನಾಡಿ ಬದಲಿ ಮಾರ್ಗಕ್ಕೆ ಪ್ರಯತ್ನಿಸುತ್ತೇನೆ. ಬದಲಿ ಮಾರ್ಗ ಸಾಧ್ಯವಾಗದಿದ್ದರೆ ರೈತರಿಗೆ ಹೆಚ್ಚು ಪರಿಹಾರ ನೀಡುತ್ತೇವೆ. ದಯವಿಟ್ಟು ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಾಗರ ಉಪವಿಭಾಗಧಿಕಾರಿ ದೃಷ್ಠಿ, ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್, ರೈತ ಮುಖಂಡರಾದ ಈಸೂರು ಸಂತೋಷ್, ಡಿ.ಎಸ್. ಈಶ್ವರಪ್ಪ, ಸುಭಾಷ್ ಚಂದ್ರ, ರಾಜೇಶ್, ಮಂಜಪ್ಪ, ಚಿಕ್ಕಜೋಗಿಹಳ್ಳಿ,ಈಸೂರು, ಚುರ್ಚಿಗುಂಡಿ, ಕೊರಲಹಳ್ಳಿ ಗ್ರಾಮಗಳ ರೈತರು ಉಪಸ್ಥಿತರಿದ್ದರು.
Leave a comment