ಶಿಕಾರಿಪುರ ಲೈವ್:
ಬಂಜಾರ ಸಮುದಾಯದ ಹಕ್ಕು ಪ್ರಗತಿ ಪರಿವರ್ತನೆಗಾಗಿ ಆಯೋಜಿಸಿರುವ ಗೋರ್ ಬಂಜಾರ ಜನಜಾಗೃತಿ ಸೇವಾ ರಥಯಾತ್ರೆ ತಾಲ್ಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ಬಂಜಾರ ಸಮಾಜ ಬಾಂಧವರು ಅದ್ಧೂರಿಯಾಗಿ ಸ್ವಾಗತಿಸಿದರು.
ಹೊನ್ನಾಳಿ ತಾಲ್ಲೂಕಿನಿಂದ ಶಿಕಾರಿಪುರ ತಾಲ್ಲೂಕಿಗೆ ಆಗಮಿಸಿದ ಜನಜಾಗೃತಿ ಸೇವಾ ರಥಯಾತ್ರೆಯನ್ನು ಬಳ್ಳೂರು ಗ್ರಾಮದಲ್ಲಿ ಬಂಜಾರ ಸಮಾಜ ಬಾಂಧವರು ವಿಜೃಂಭಣೆಯಿಂದ ಸ್ವಾಗತಿಸಿದರು. ನಂತರ ಜಾಗೃತಿ ರಥಯಾತ್ರೆ ವಿವಿಧ ಗ್ರಾಮಗಳ ಮೂಲಕ ಶಿಕಾರಿಪುರ ಪಟ್ಟಣ ಪ್ರವೇಶಿಸಿತು. ಪಟ್ಟಣದಲ್ಲಿ ಸಂಸದ ಬಿ.ವೈ. ರಾಘವೇಂದ್ರ ರಥಯಾತ್ರೆಯನ್ನು ಸ್ವಾಗತಿಸಿದರು. ನಂತರ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಬಂಜಾರ ಸಮಾಜದ ಹಿರಿಯರು ಕಾಡಿನಲ್ಲಿ ಸಿಗುವ ಬಾರೆಹಣ್ಣು,ಪರಗಿಹಣ್ಣು,ಕೌಳೆಕಾಯಿ ತಂದು ಮಾರಾಟ ಮಾಡಿ ಜೀವನ ನಡೆಸಿದರು. ಆವರ ಶ್ರಮದ ಫಲ ಇಂದು ಮಕ್ಕಳು ಶಿಕ್ಷಿತರಾಗಿದ್ದಾರೆ. ತಮ್ಮ ಹಕ್ಕಿಗಾಗಿ ಒತ್ತಾಯಿಸಿ ಬಂಜಾರ ಸಮಾಜ ಈ ಜಾಗೃತಿ ರಥಯಾತ್ರೆ ಆಯೋಜಿಸಿದ್ದು ಫ್ರೀಡಂ ಪಾರ್ಕ್ ನಲ್ಲಿ ಸಮಾರೋಪಗೊಳ್ಳಲಿದೆ. ಪಕ್ಷಾತೀತವಾಗಿ ರಥಯಾತ್ರೆಯನ್ನು ಸ್ವಾಗತಿಸಲಾಗಿದೆ. ರಾಜ್ಯ ಸರ್ಕಾರ ಬಂಜಾರ ಸಮಾಜ ಬಾಂಧವರ ಮನವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಗೋರ್ ಸೇನಾ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಬಾಳಾಸಾಹೇಬ್ ರಾಥೋಡ್, ಬಂಜಾರ ಸಮಾಜ ಆರ್ಥಿಕವಾಗಿ,ಶೈಕ್ಷಣಿಕವಾಗಿ ಹಿಂದುಳಿದ ಸಮಾಜವಾಗಿದೆ. ಡಾ.ಅಂಬೇಡ್ಕರ್ ಸಂವಿಧಾನದ ಮೂಲಕ ನಮಗೆ ಮೀಸಲಾತಿ ಬಂದಿದೆ. ಈ ಮೀಸಲಾತಿ ಕಿತ್ತುಕೊಳ್ಳುವ ಪ್ರಯತ್ನ ಯಾರು ಮಾಡಬಾರದು. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ನಮ್ಮ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಮೂಡನಂಬಿಕೆ ಅನುಸರಿಸುತ್ತಿದ್ದಾರೆ. ಈ ಸಮಾಜ ಜಾಗೃತಗೊಳಿಸಲು ಹಾಗೂ ನಮ್ಮ ಮೀಸಲಾತಿ ಹಕ್ಕುಪಡೆಯಲು ಆಯೋಜಿಸಲಾಗಿದೆ. ಇದು ಯಾವುದೇ ಪಕ್ಷದ ಪರ ಹಾಗೂ ಯಾವುದೇ ಪಕ್ಷದ ವಿರೋಧ ರಥಯಾತ್ರೆ ಮಾಡುತ್ತಿಲ್ಲ. ಪಕ್ಷಾತೀತವಾಗಿ ಸಮಾಜ ಮುಖಂಡರು ಮುಂದಿನ ಪೀಳಿಗೆ ಮಕ್ಕಳ ಹಕ್ಕಿಗಾಗಿ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸಂಸದ ಉಮೇಶ್ ಜಾಧವ್ ಮಾತನಾಡಿ, ಬೀದರ್ ಬಾಲ್ಕಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೂ ಜಾಗೃತಿ ರಥಯಾತ್ರೆ ಸಂಚರಿಸಲಿದೆ. ಶಿಕಾರಿಪುರದಲ್ಲಿ ಉತ್ಸಾಹದಿಂದ ಸಮಾಜದ ಜನರು ಪಾಲ್ಲೊಂಡಿದ್ದಾರೆ. ಸಂಸದ ರಾಘವೇಂದ್ರ ಅವರು ನಮ್ಮ ಸಮಾಜದ ಬಗ್ಗೆ ಕಾಳಜಿ ಹೊಂದಬೇಕು. ಒಳಮೀಸಲಾತಿ ಗೊಂದಲವನ್ನು ರಾಜ್ಯ ಸರ್ಕಾರ ಸರಿಪಡಿಸಬೇಕು. ಸಮಾಜಕ್ಕೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು.
ಸಾಲೂರು ಮರಿಯಮ್ಮ ಮಠದ ಪೀಠಾಧ್ಯಕ್ಷ ಸೈನಾಭಗತ್ ಸ್ವಾಮೀಜಿ ಗೋರ್ ಸೇನಾ ಸಂಘಟನೆ ರಾಜ್ಯ ಉಪಾಧ್ಯಕ್ಷ ರವಿ, ತಾಲ್ಲೂಕು ಬಂಜಾರ ಸಮಾಜ ಅಧ್ಯಕ್ಷ ಕುಮಾರನಾಯ್ಕ, ಗೋರ್ ಸೇನಾ ಸಂಘಟನೆ ಜಿಲ್ಲಾಧ್ಯಕ್ಷ ಚಂದ್ರು ಎಸ್. ನಾಯ್ಕ, ತಾಲ್ಲೂಕು ಅಧ್ಯಕ್ಷ ಮಂಜುನಾಯ್ಕ, ಮುಖಂಡರಾದ ರಾಮನಾಯ್ಕ, ನರಸಿಂಗನಾಯ್ಕ, ರಾಘವೇಂದ್ರ ನಾಯ್ಕ, ಶಶಿನಾಯ್ಕ, ಬೋಜರಾಜನಾಯ್ಕ, ವಸಂತನಾಯ್ಕ, ವಿಜಯಲಕ್ಷ್ಮಿ, ಪುನೀತ್ ನಾಯ್ಕ, ಲೋಹಿತನಾಯ್ಕ, ವಿವಿಧ ಗ್ರಾಮದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
Leave a comment