ಶಿಕಾರಿಪುರ ಲೈವ್:
ಗೋರ್ ಬಂಜಾರ್ ಜನಜಾಗೃತಿ ರಥಯಾತ್ರೆ ಮಾರ್ಚ್ 8ರಂದು ಮಧ್ಯಾಹ್ನ12ಗಂಟೆಗೆ ಶಿಕಾರಿಪುರ ಪಟ್ಟಣಕ್ಕೆ ಆಗಮಿಸಲಿದ್ದು ಈ ರಥಯಾತ್ರೆಯನ್ನು ಬಂಜಾರ ಸಮಾಜ ಬಾಂಧವರು ಯಶಸ್ವಿಗೊಳಿಸಬೇಕು ಎಂದು ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಕುಮಾರ ನಾಯ್ಕ ಮನವಿ ಮಾಡಿದರು.
ಪಟ್ಟಣದ ಸುದ್ದಿ ಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯದ ಹಕ್ಕು ಪ್ರಗತಿ ಪರಿವರ್ತನೆಗಾಗಿ ಆಯೋಜಿಸಿರುವ ಗೋರ್ ಬಂಜಾರ ಜನಜಾಗೃತಿ ಸೇವಾ ರಥಯಾತ್ರೆ ಬೀದರ್ ಜಿಲ್ಲೆ ಬಾಲ್ಕಿಯಿಂದ ಮಾ.4ರಂದು ಆರಂಭವಾಗಿದೆ. ಈ ರಥಯಾತ್ರೆಯ ಮಾ.8ರಂದು ಶಿಕಾರಿಪುರ ಪಟ್ಟಣಕ್ಕೆ ಆಗಮಿಸಲಿದ್ದು ತಾಲ್ಲೂಕು ಬಂಜಾರ ಸಮಾಜ ಹಾಗೂ ಗೋರ್ ಸೇನಾ ಸಂಘಟನೆ ನೇತೃತ್ವದಲ್ಲಿ ಹುಚ್ಚರಾಯಸ್ವಾಮಿ ದೇವಸ್ಥಾನ ಮುಂಭಾಗ ರಥ ಯಾತ್ರೆಯನ್ನು ಸ್ವಾಗತಿಸಲಿದ್ದೇವೆ. ನಂತರ ಈ ರಥಯಾತ್ರೆ ಶಿವಮೊಗ್ಗ ಮೂಲಕ ಮಾ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದ್ದು,ಬೃಹತ್ ಸಮಾವೇಶದ ಮೂಲಕ ರಥಯಾತ್ರೆ ಮುಕ್ತಾಯಗೊಳ್ಳಲಿದೆ ಎಂದರು.
ಗೋರ್ ಸೇನಾ ರಾಷ್ಟ್ರೀಯ ಸಂಘಟನೆ ಜಿಲ್ಲಾಧ್ಯಕ್ಷ ಚಂದ್ರು ಎಸ್. ನಾಯ್ಕ ಮಾತನಾಡಿ, ಬಂಜಾರ ಸಮಾಜ ಬಾಂಧವರು ಉತ್ತಮ ಶಿಕ್ಷಣ ಪಡೆಯದೇ ಅಜ್ಞಾನ ಹಾಗೂ ಮೂಢನಂಬಿಕೆಯಲ್ಲಿ ಕಾಲ ಕಳೆಯುತ್ತಿದೆ. ಒಂದು ಕಾಲದಲ್ಲಿ ಉತ್ತಮ ವ್ಯಾಪಾರ ವಹಿವಾಟು ಹೊಂದಿದ್ದ ಸಮಾಜ ಬಾಂಧವರು ಇಂದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಈ ಸಮಾಜವನ್ನು ಆರ್ಥಿಕವಾಗಿ,ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸಲು ಗೋರ್ ಬಂಜಾರ ಜನಜಾಗೃತಿ ಸೇವಾ ರಥ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ರಥಯಾತ್ರೆ ಮಾ.8ರಂದು ಶಿಕಾರಿಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಎಲ್ಲಾ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಥಯಾತ್ರೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸೂರಗೊಂಡನಕೊಪ್ಪ ಮಹಾಮಠದ ಸದಸ್ಯ ವಿಜಯ ನಾಯ್ಜ, ಬಂಜಾರ ಸಮಾಜ ಕಾರ್ಯದರ್ಶಿ ಆನಂದ ನಾಯ್ಕ, ನಿರ್ದೇಶಕ ಬಿದರಕೊಪ್ಪ ಜಗದೀಶ್ ನಾಯ್ಕ ಗೋರ್ ಸೇನಾ ರಾಷ್ಟ್ರೀಯ ಸಂಘಟನೆ ತಾಲೂಕು ಅಧ್ಯಕ್ಷ ಮಂಜನಾಯ್ಕ, ಪದಾಧಿಕಾರಿಗಳಾದ ಸೋಮನಾಯ್ಕ, ಕಿರಣ್ ನಾಯ್ಕ, ಪವನ್ ನಾಯ್ಕ, ಕೃಷ್ಣನಾಯ್ಕ ಉಪಸ್ಥಿತರಿದ್ದರು.
Leave a comment