ಶಿಕಾರಿಪುರ ಲೈವ್:
ಪ್ರತಿಯೊಬ್ಬ ಮಕ್ಕಳಲ್ಲೂ ಪ್ರತಿಭೆ ಇದ್ದು,ಈ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು ಸಲಹೆ ನೀಡಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಜಾಬ್ ಅಕಾಡೆಮಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಪ್ರಯುಕ್ತ ಆಯೋಜಿಸಿದ್ದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಣ,ಆಸ್ತಿಗಿಂತ ನಾವು ಪಡೆದ ಶಿಕ್ಷಣ ಸಮಾಜದಲ್ಲಿ ನಮಗೆ ಗೌರವ ತಂದು ಕೊಡುತ್ತದೆ. ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಹುದ್ದೆ ಪಡೆಯಲು ಮಕ್ಕಳಿಗೆ ಪೋಷಕರು ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಬೇಕು. ಜೀವನದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳು ನಿಮಗೆ ಪ್ರೇರಣೆಯಾಗಬೇಕು. ಜಾಬ್ ಅಕಾಡೆಮಿ ಸಂಸ್ಥೆ ಮಕ್ಕಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮುಂದಾಗಬೇಕು. ಮಕ್ಕಳು ಕೇವಲ ಓದಿಗೆ ಮಾತ್ರ ಸೀಮಿತವಾಗದೇ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಮಾತೃಭಾಷೆ ಕನ್ನಡದ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ಬೋಜರಾಜನಾಯ್ಕ್ ಮಾತನಾಡಿ, ಶಿಕ್ಷಣ ವ್ಯಕ್ತಿಗೆ ಜಾತಿ ಧರ್ಮವನ್ನು ಮೀರಿ ಗೌರವ ತಂದುಕೊಡುತ್ತದೆ. ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ನಮ್ಮ ಕುಟುಂಬ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ. ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂಬ ಸಂದೇಶ ಸಾರಿದ್ದರು. ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಲು ಆದ್ಯತೆ ನೀಡಬೇಕು. ಜಾಬ್ ಅಕಾಡೆಮಿ ಸಂಸ್ಥೆ ಬೇಸಿಗೆ ಶಿಬಿರದ ಮೂಲಕ ಮಕ್ಕಳಿಗೆ 40ದಿನಗಳ ಕಾಲ ಗುಣಮಟ್ಟದ ಶಿಕ್ಷಣ ನೀಡಿದೆ ಎಂದು ಶ್ಲಾಘಿಸಿದರು.
ಪರೋಪಕಾರಂ ತಂಡದ ಸದಸ್ಯ ಲಕ್ಷ್ಮಣ್ ಮಾತನಾಡಿ, ಶಿಕ್ಷಣದ ಸಾಮಾಜಿಕ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಸ್ನೇಹಿತರಿಲ್ಲ ಒಟ್ಟಾಗಿ ಪರೋಪಕರಾಂ ತಂಡದ ಮೂಲಕ ಪಟ್ಟಣದ ಸ್ವಚ್ಛತೆ ಹಾಗೂ ಹಸಿರೀಕರಣಕ್ಕೆಆದ್ಯತೆ ನೀಡುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಜಾಬ್ ಅಕಾಡೆಮಿ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಜಾಬ್ ಅಕಾಡೆಮಿ ನಿರ್ದೇಶಕ ಲಕ್ಷ್ಮಣ್ ನಾಯ್ಕ, ಸಂಯೋಜಕ ಮಣಿಕಂಠನಾಯ್ಕ, ಸಂಪನ್ಮೂಲ ವ್ಯಕ್ತಿಗಳಾದ ಪವಿತ್ರಾ, ಸಿಂಚನಾ, ಲಿಂಗರಾಜ್, ಮಣಿಕಂಠನಾಯ್ಕ, ಕುಮಾರನಾಯ್ಕ, ಕಿರಣ್, ಜಯಶಂಕರ್, ದೀಪಾ, ಜಾನಕಿ ಮತ್ತಿತರರು ಉಪಸ್ಥಿತರಿದ್ದರು.
Leave a comment