ಶಿಕಾರಿಪುರ ಲೈವ್:
ಪಟ್ಟಣದ ಪುರಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿ ಸುನಂದಾ ಮಂಜುನಾಥ್ ಬಾಳೆಕಾಯಿ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ ಯೋಗೀಶ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಸುನಂದಾ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಸಾಗರ ಉಪವಿಭಾಧಿಕಾರಿ ರಶ್ಮಿ ಘೋಷಣೆ ಮಾಡಿದರು.ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಸುನಂದಾ ಮಂಜುನಾಥ್ ಅವರಿಗೆ ಶಾಸಕ ಬಿ.ವೈ. ವಿಜಯೇಂದ್ರ ಹೂ ಗುಚ್ಛ ನೀಡಿ ಸಿಹಿ ತಿನ್ನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ವೈ. ವಿಜಯೇಂದ್ರ, ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜನಪರವಾಗಿ ಉತ್ತಮ ಕೆಲಸ ಮಾಡಬೇಕು,ಜನರ ಪ್ರೀತಿ ವಿಶ್ವಾಸ ಗಳಿಸಬೇಕು. ಪಟ್ಟಣದ ನಾಗರಿಕರು ಈ ಸ್ವತ್ತು ಪಡೆಯಲು ಪರದಾಡುತ್ತಿದ್ದಾರೆ. ಸಮರ್ಪಕವಾಗಿ ಈ ಸ್ವತ್ತು ನೀಡುವ ಬಗ್ಗೆ ಗಮನಹರಿಸಬೇಕು. ಪಟ್ಟಣದ ಸ್ವಚ್ಛತೆ ಬಗ್ಗೆ ಗಮನ ನೀಡಬೇಕು. ಪುರಸಭೆ ಅಧ್ಯಕ್ಷರು, ಸದಸ್ಯರು ಮಾಡುವ ಒಳ್ಳೆ ಕೆಲಸಗಳು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘಣ್ಣ ಹಾಗೂ ನನಗೆ ಉತ್ತಮ ಹೆಸರು ತಂದು ಕೊಡುತ್ತದೆ. ನೀವು ಮಾಡುವ ಕೆಟ್ಟ ಕೆಲಸಗಳು ನಮಗೆ ಕೆಟ್ಟ ಹೆಸರು ತರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ನಮಗೆ ಒಳ್ಳೆ ಹೆಸರು ಬರುವಂತೆ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪುರಸಭೆ ನೂತನ ಅಧ್ಯಕ್ಷೆ ಸುನಂದಾ ಮಂಜುನಾಥ್ ಬಾಳೆಕಾಯಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ನಾನು ಅಧ್ಯಕ್ಷೆಯಾಗಲು ಸಹಕಾರ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ, ಸಂಸದರಾದ ರಾಘಣ್ಣ, ಶಾಸಕ ವಿಜಯಣ್ಣ ಹಾಗೂ ಎಲ್ಲಾ ಪುರಸಭೆ ಸದಸ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ. ಅವರ ಮಾರ್ಗದರ್ಶನದಂತೆ ಕಾರ್ಯ ನಿರ್ವಹಿಸುತ್ತೇನೆ ಎಂದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಪುರಸಭೆ ಉಪಾಧ್ಯಕ್ಷೆ ರೂಪ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗುಂಡ, ಸದಸ್ಯರಾದ ಲಕ್ಷ್ಮಿ ಮಹಾಲಿಂಗಪ್ಪ, ರೇಖಾಬಾಯಿ ಮಂಜುನಾಥಸಿಂಗ್, ರೂಪಕಲಾ ಹೆಗಡೆ, ಭದ್ರಾಪುರ ಫಾಲಾಕ್ಷ, ಫೈರೋಜಾ ಭಾನು, ಮೊಹಮದ್ ಸಾಧಿಕ್, ಜೀನಳ್ಳಿ ಪ್ರಶಾಂತ್, ರೇಣುಕಾಸ್ವಾಮಿ, ಸುರೇಶ್, ಉಮಾವತಿ, ಡಿ.ಆರ್. ರಾಘವೇಂದ್ರ, ಪುರಸಭೆ ವ್ಯವಸ್ಥಾಪಕ ರಾಜ್ ಕುಮಾರ್, ಸಮುದಾಯ ಸಂಘಟನಾಧಿಕಾರಿ ಸುರೇಶ್, ಬಿಜೆಪಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಬಿಜೆಪಿ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
Leave a comment