ಶಿಕಾರಿಪುರ ಲೈವ್:
ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಪಟ್ಟಣ ಸಮೀಪದ ನೆರಲಗಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸರ್ಕಾರದ ನಾಮ ನಿರ್ದೇಶನಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಆರ್ಎಸ್ ಎಸ್ ಕಾರ್ಯಕರ್ತರಿಗೆ ನಾಗರಾಜ್ ಗೌಡ ಅವಕಾಶ ನೀಡಿದ್ದಾರೆಂದು ಎಂದು ಆರೋಪಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸಮ್ಮುಖದಲ್ಲೇ ಶಿಕಾರಿಪುರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಶಿಕಾರಿಪುರ ಕಾಂಗ್ರೆಸ್ನಲ್ಲಿ ಸರ್ವಾಧಿಕಾರ ಮತ್ತು ಏಕಪಕ್ಷೀಯ ನಿರ್ಧಾರವನ್ನು ಗ್ಯಾರಂಟಿಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ. ನಾಗರಾಜ್ ಗೌಡ ಕೈಗೊಳ್ಳುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರಿಗೆ ಹೆಚ್ಚು ಅಧಿಕಾರ ನೀಡಿದ್ದಾರೆ. ನಾಗರಾಜಗೌಡ ಈ ನಿರ್ಧಾರದಿಂದ ಕಾಂಗ್ರೆಸ್ನ ಕಾರ್ಯಕರ್ತರಿಗೆ ತುಂಬಾ ನೋವು ಮತ್ತು ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಇದುವರೆಗೂ ಯಾವುದೇ ಬಾಡಿ ರಚನೆ ಮಾಡಿಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕೆಪಿಸಿಸಿ ಕಾರ್ಯದರ್ಶಿ ಕಾರ್ಯಕರ್ತರ ಮತ್ತು ಪಕ್ಷದ ಮುಖಂಡರ ಸಭೆ ಕರೆದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಉಚ್ಚಾಟನೆ ಬೆದರಿಕೆ ಹಾಕುತ್ತಾರೆ. ಪಕ್ಷದಲ್ಲಿ ದುಡಿದವರನ್ನು ಪರಿಗಣಿಸದೇ ಬಿಜೆಪಿ ಕಾರ್ಯಕರ್ತರಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಅಧಿಕಾರ ಕೊಡುತ್ತಿದ್ದಾರೆ ಎಂದು ದೂರಿದರು.
ನಾಗರಾಜ್ ಗೌಡ್ರು ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಕೆ.ಎಸ್. ಗುರುಮೂರ್ತಿ ಜೊತೆ ನಿಕಟ ಸಂಪರ್ಕ ಹೊಂದಿದ್ದು ಅವರ ಮಾತು ಕೇಳುತ್ತಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಎಬ್ಬಿಸಿದರು. ಕಾರ್ಯಕರ್ತರ ಗಲಾಟೆ ಕಂಡು ಸಚಿವ ಮಧು ಬಂಗಾರಪ್ಪ, ಹಾಗೂ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಕಾರ್ಯಕರ್ತರನ್ನು ಸಮಾಧಾನಪಡಿಸುವ ಪ್ರಯತ್ನದ ನಡುವೆಯೇ ಸಭೆಯನ್ನು ಮುಕ್ತಾಯಗೊಳಿಸಿದರು. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ.
Leave a comment