ಶಿಕಾರಿಪುರ ಲೈವ್:
ಪರಸ್ಪರ ಬಣ್ಣ ಹಚ್ಚುವ ಮೂಲಕ ಪಟ್ಟಣದ ಜನತೆ ಹೋಳಿ ಹಬ್ಬವನ್ನು ಶುಕ್ರವಾರ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಹಳಿಯೂರು,ದೊಡ್ಡಪೇಟೆ,ಮಂಡಿಪೇಟೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ವಿವಿಧ ಸಂಘಟನೆ ಪದಾಧಿಕಾರಿಗಳು ತಾವು ಪ್ರತಿಷ್ಠಾಪಿಸಿದ್ದ
ಕಾಮನ ಮೂರ್ತಿಯನ್ನು ಮುಂಜಾನೆ ದಹನ ಮಾಡುವ ಮೂಲಕ ಹೋಳಿ ಹಬ್ಬವನ್ನು ಆರಂಭಿಸಿದರು. ಹಿಂದೂ ಮಹಾಸಭಾ ಸಂಘಟನೆ ಪದಾಧಿಕಾರಿಗಳು ಹಾಗೂ ಯುವಕರು ಪ್ರಮುಖ ಬೀದಿಗಳಲ್ಲಿ ಡಿಜೆ ಹಾಡು,ತಮಟೆ ವಾದ್ಯ,ಬಣ್ಣದ ಕಾರಂಜಿಯೊಂದಿಗೆ ನೃತ್ಯ ಮಾಡುತ್ತಾ ಹಾಗೂ ಪರಸ್ಪರ ಬಣ್ಣ ಹಚ್ಚುತ್ತಾ ಹೆಜ್ಜೆ ಹಾಕಿದರು.
ಕೆಲವು ಬಡಾವಣೆಗಳಲ್ಲಿ ಮಹಿಳೆಯರು, ಯುವತಿಯರು ಹಾಗೂ ಪುಟಾಣಿ ಮಕ್ಕಳು ವಯಸ್ಸಿನ ಅಂತರವಿಲ್ಲದೆ ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಹಲವು ಸ್ನೇಹಿತರ ಗುಂಪುಗಳು ದ್ವಿಚಕ್ರ ವಾಹನ ಸೇರಿದಂತೆ ವಿವಿಧ ವಾಹನಗಳ ಮೂಲಕ ವಿವಿಧ ಬಡಾವಣೆಗಳಲ್ಲಿರುವ ಸ್ನೇಹಿತರ ಮನೆಗೆ ತೆರಳಿ,ಮನೆಯಲ್ಲಿದ್ದ ಸ್ನೇಹಿತರಿಗೆ ಬಣ್ಣ ಹಚ್ಚುವ ಮೂಲಕ,ಸ್ನೇಹಿತರನ್ನು ಹೋಳಿ ಹಬ್ಬ ಆಚರಿಸಲು ತಮ್ಮೊಡನೆ ಕರೆದೊಯ್ಯುತ್ತಿದ್ದ ದೃಶ್ಯ ಕಂಡು ಬಂದಿತು. ಹೋಳಿ ಹಬ್ಬದ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
Leave a comment