ಶಿಕಾರಿಪುರ ಲೈವ್:
ಹಿಂದೂ ಧರ್ಮಕ್ಕೆ ಸವಾಲು ಎದುರಾದಾಗ ಛತ್ರಪತಿ ಶಿವಾಜಿ ಮಹಾರಾಜರ ರೀತಿ ಹೋರಾಟ ಮಾಡಲು ನಾವೆಲ್ಲಾ ಸಿದ್ದರಾಗಬೇಕು ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಕರೆ ನೀಡಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತ ಹಾಗೂ ತಾಲೂಕು ಮರಾಠ ಸಮಾಜ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿ ಜೀಜಾಬಾಯಿ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ ಹಿಂದೂ ಸಾಮ್ರಾಜ್ಯವನ್ನೇ ಉಳಿಸಿ ಬೆಳೆಸುವ ಮಟ್ಟಕ್ಕೆ ಶಿವಾಜಿ ಮಹಾರಾಜರು ಬೆಳೆದಿದ್ದರು. ಮೊಘಲರ ವಿರುದ್ಧ ಹೋರಾಟ ಮಾಡಿ ದೇಶ ರಕ್ಷಣೆ ಮಾಡಿದರು. ಹಿಂದೂವೀ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಸನಾತನ ಧರ್ಮಕ್ಕೆ ಗೌರವ ಸಿಗುವಂತೆ ಮಾಡಿದರು. ಯುವ ಸಮುದಾಯ ದೇಶದ ಇತಿಹಾಸವನ್ನು ತಿಳಿಯಬೇಕು ಹಾಗೂ ಇತಿಹಾಸವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಗೋಮಾತೆ ಎಂದು ಪೂಜಿಸುವ ಗೋವಿನ ಕೆಚ್ಚಲನ್ನು ಹಾಗೂ ಬಾಲವನ್ನು ಕತ್ತರಿಸುವ ದುಷ್ಟರು ನಮ್ಮ ಮಧ್ಯೆ ಇರುವುದು ದುರಂತದ ಸಂಗತಿ ಆಗಿದ್ದು,ನಾವೆಲ್ಲಾ ಜಾಗೃತರಾಗಿರಬೇಕು ಎಂದರು.
ಶಿವಾಜಿ ಮಹಾರಾಜರ ದೇಶ ಭಕ್ತಿಯ ತತ್ವ ಆದರ್ಶಗಳನ್ನು ಯುವ ಸಮುದಾಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮರಾಠ ಸಮಾಜದ ಮಠದ ಅಭಿವೃದ್ಧಿಗೆ ಅನುದಾನ ನೀಡಿದ್ದರು. ತಾಲೂಕು ಆಡಳಿತ ಶಿವಾಜಿ ಜಯಂತಿ ಆಚರಣೆಯಲ್ಲಿ ನಿರ್ಲಕ್ಷ ತೋರಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಯಾವುದೇ ಜಯಂತಿ ಆಚರಣೆ ಬಗ್ಗೆ ಗೊಂದಲ ಆಗದಂತೆ ಆಧಿಕಾರಿಗಳು ಉತ್ತಮ ರೀತಿಯಲ್ಲಿ ಜಯಂತಿ ಆಚರಿಸಬೇಕು ಎಂದು ಸೂಚಿಸಿದರು.
ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ ಯೋಗೀಶ್ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಮರಾಠ ಸಮಾಜ ಅಧ್ಯಕ್ಷ ಗುರುರಾಜ್ ರಾವ್ ಜಗತಾಪ್, ಗ್ರೇಡ್ 2 ತಹಶೀಲ್ದಾರ್ ರವಿಕುಮಾರ್, ಶಿರಸ್ತೇದಾರ್ ವಿನಯ್ ಎಂ.ಆರಾದ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಬಿ. ಸುಧೀರ್, ಪುರಸಭೆ ವ್ಯವಸ್ಥಾಪಕ ರಾಜ್ ಕುಮಾರ್, ಮುಖಂಡರಾದ ಕೆ.ಜಿ. ವಸಂತಗೌಡ್ರು, ಬಿ.ಸಿ. ವೇಣುಗೋಪಾಪ್, ಬಂಗಾರಿ ನಾಯ್ಕ, ಸಂಕ್ಲಾಪುರ ಹನುಮಂತಪ್ಪ, ಗಣೇಶ್ ಕರಾಡೆ ದಾನೋಜಿರಟವ್, ಚಂದ್ರೋಜಿ ರಾವ್, ರವೀಂದ್ರ, ನಾರಾಯಣರಾವ್ ಶಿಂದೆ, ದಿವಾಕರ, ಪ್ರಶಾಂತ್ ಸಾಳಂಕೆ, ವಿಕಾಸ್, ಅಶೋಕ್, ತೋಪೋಜಿ ರಾವ್, ಹನುಮಂತಪ್ಪ, ರೇವಣಪ್ಪ, ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು.
ಶಿವಾಜಿ ಜಯಂತಿ ಆಚರಣೆ ನಿರ್ಲಕ್ಷ ಮರಾಠ ಸಮಾಜ ಮುಖಂಡರ ಪ್ರತಿಭಟನೆ,ಪ್ರತಿಭಟನಾ ಸ್ಥಳಕ್ಕೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ ಮುಖಂಡರ ಮನ ಓಲೈಕೆ :
ಹಿಂದೂ ಸಾಮ್ರಾಜ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮದ ಬಗ್ಗೆ ತಾಲೂಕ ಆಡಳಿತ ನಿರ್ಲಕ್ಷ್ಯ ಭಾವನೆ ತೋರಿದೆ ಎಂದು ಆರೋಪಿಸಿ ತಾಲೂಕು ಮರಾಠ ಸಮಾಜದ ನೇತೃತ್ವದಲ್ಲಿ ಮರಾಠ ಸಮಾಜದ ಭಾಂದವರು ತಾಲೂಕ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಮರಾಠ ಸಮಾಜ ಅಧ್ಯಕ್ಷ ಗುರುರಾಜ್ ರಾವ್ ಜಗತಾಪ್, ತಾಲೂಕು ಆಡಳಿತ ಶಿವಾಜಿ ಜಯಂತಿಯನ್ನು ಕಾಟಚಾರಕ್ಕಾಗಿ ಆಚರಿಸುತ್ತಿದೆ. ಆಹ್ವಾನ ಪತ್ರಿಕೆಯಲ್ಲಿ ಜಯಂತಿ ಕಾರ್ಯಕ್ರಮ ನಡೆಯುವ ಸ್ಥಳದ ಬಗ್ಗೆ ಗೊಂದಲವನ್ನುಂಟು ಮಾಡಿದೆ. ತಾಲೂಕು ಮರಾಠ ಸಮಾಜವೆಂದು ಮುದ್ರಿಸುವ ಬದಲು,ತಾಲ್ಲೂಕು ಬಂಜಾರ ಸಮಾಜ ಎಂದು ಮುದ್ರಿಸಿದೆ. ಈ ಮೂಲಕ ದೇಶಭಕ್ತ ಶಿವಾಜಿ ಮಹಾರಾಜರಿಗೆ ಅವಮಾನ ಮಾಡಲು ಮುಂದಾಗಿದೆ. ತಪ್ಪು ಮುದ್ರಿಸಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಉದ್ಹಟತನದ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಂಸದರಾದ ಬಿ.ವೈ. ರಾಘವೇಂದ್ರ,
ಶಿವಾಜಿ ಜಯಂತಿ ಸೇರಿದಂತೆ ಯಾವುದೇ ಜಯಂತಿ ಆಚರಣೆ ಬಗ್ಗೆ ತಾಲೂಕ ಆಡಳಿತ ನಿರ್ಲಕ್ಷ್ಯ ಭಾವನೆ ತೋರಬಾರದು. ಅಧಿಕಾರಿಗಳು ಅರ್ಥಪೂರ್ಣವಾಗಿ ಜಯಂತಿ ಆಚರಿಸಲು ಮುಂದಾಗಬೇಕು. ಜಯಂತಿ ಆಚರಣೆಗೆ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ನಂತರ ಪ್ರತಿಭಟನೆ ಕೈ ಬಿಟ್ಟು ಜಯಂತಿ ಆಚರಣೆಗೆ ಎಲ್ಲರೂ ಮುಂದಾಗೋಣ ಎಂದು ಮರಾಠ ಸಮಾಜದ ಬಂಧುಗಳ ಮನ ಓಲೈಸಿದರು. ನಂತರ ಶಿವಾಜಿ ಜಯಂತಿ ಕಾರ್ಯಕ್ರಮ ನಡೆಯಿತು
Leave a comment