ಶಿಕಾರಿಪುರ ಲೈವ್:
ಹಿಂದೂ ಧರ್ಮ ಹಾಗೂ ನಮ್ಮ ದೇಶದ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಯುವ ಸಮುದಾಯ ಮುಂದಾಗಬೇಕು ಸಂಸದರಾದ ಬಿ.ವೈ. ರಾಘವೇಂದ್ರ ಕರೆನೀಡಿದರು.
ತಾಲ್ಲೂಕಿನ ದಿಂಡದಹಳ್ಳಿ ಗ್ರಾಮದ ಧರ್ಮಕ್ಷೇತ್ರ ಹಿರೇಮಠದಲ್ಲಿ ಗುರುವಾರ ಮರುಳಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ,ಜಂಗಮ ವಟುಗಳಿಗೆ ಶಿವಧೀಕ್ಷೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಪ್ರಯುಕ್ತ ನಡೆದ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಧಾರ್ಮಿಕ ಪರಂಪರೆಯನ್ನು ಮಠ ಹಾಗೂ ಮಠಾಧೀಶರು ಉಳಿಸಿ ಬೆಳೆಸುತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ಲೋಕಕಲ್ಯಾಣಾರ್ಥ ನಡೆಯುತ್ತಿವೆ.
ಮಠಗಳು ಆಯೋಜಿಸುವ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಬರಬೇಕು. ಗುರುಗಳ ಆಶೀರ್ವಚನ ಕೇಳಿಸಬೇಕು.
ಸಾಮೂಹಿಕ ವಿವಾಹದಲ್ಲಿ ಮದುವೆಯಾದ ವಧು ವರರು ಪರಸ್ಪರ ಹೊಂದಾಣಿಕೆಯಿಂದ ಮಾದರಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಶಿವಾಜಿ ಮಹಾರಾಜ್ ಹಾಗೂ ಸ್ವಾಮಿ ವಿವೇಕಾನಂದರು ಹಿಂದೂ ಸಮಾಜವನ್ನು ಕಟ್ಟುವ ಕೆಲಸ ಮಾಡಿದರು. ಸ್ವಾಮಿ ವಿವೇಕಾನಂದ ಹಾಗೂ ಶಿವಾಜಿ ಮಹಾರಾಜ್ ರೀತಿಯಲ್ಲಿ ನಿಮ್ಮ ಮಕ್ಕಳನ್ನು ಬೆಳೆಸಲು ತಾಯಂದಿರು ಸಂಕಲ್ಪ ಮಾಡಬೇಕು. ಸರಿದಾರಿಯಲ್ಲಿ ಮಕ್ಕಳನ್ನು ಬೆಳೆಸಬೇಕು. ಗೋಸಂರಕ್ಷಣೆಗೆ ಮುಂದಾಗಬೇಕು. ತಾಲ್ಲೂಕಿಗೆ ನೀರಾವರಿ ಯೋಜನೆಯನ್ನು ಅನುಷ್ಟಾನ ಮಾಡುವ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೈತರ ಪರ ಬಜೆಟ್ ನೀಡಿದ್ದರು ಎಂದು ಶ್ಲಾಘಿಸಿದರು.
ಕಾಶಿ ಜಗದ್ಗುರುಗಳಾದ ಶ್ರೀ ಮಲ್ಲಿಕಾರ್ಜುನ ವಿಶ್ವರಾಧ್ಯ ಮಹಾಸ್ವಾಮಿಗಳ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದಿಂಡದಹಳ್ಳಿ ಮಠದ ಪಶುಪತಿ ಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿ, ರಟ್ಟೀಹಳ್ಳಿ ಕಬ್ಬಿಣ ಕಂತಿನಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಗಳು, ಬಿಳಕಿ ಮಠದ ರಾಚೋಟೇಶ್ವರ, ಮಣಕೂರು ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕುರುವತ್ತಿ ಸಿದ್ದನಂದೀಶ್ವರ ಸ್ವಾಮೀಜಿ, ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಸದಸ್ಯ ಎನ್.ವಿ. ಈರೇಶ್, ಮುಖಂಡರಾದ ವೀರೇಂದ್ರಪಾಟೀಲ್, ಮಹದೇವಪಾಟೀಲ್, ಚಂದ್ರಪ್ಪ, ಮುನಿಯಪ್ಪ, ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಗ್ರಾಮದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
Leave a comment