ಶಿಕಾರಿಪುರ ಲೈವ್:
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳ ನೌಕರರ ಸಂಘದ ನೇತೃತ್ವದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಅನಿರ್ಧಿಸ್ಠಾವಧಿ ಮುಷ್ಕರ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು 17ಕ್ಕೂ ಹೆಚ್ಚು ಮೊಬೈಲ್ ಆಪ್ ಮೂಲಕ ಸೇವೆ ನೀಡುವ ಅನಿವಾರ್ಯತೆ ಇದೆ. ಆದರೆ, ತಾಂತ್ರಿಕ ಕಾರಣಕ್ಕೆ ಅಪ್ಲಿಕೇಷನ್ ಕೆಲಸ ಮಾಡುತ್ತಿಲ್ಲ. ಆಗ ಜನರು ನಮ್ಮ ಮೇಲೆ ಸಿಟ್ಟಾಗಿ ಹಲ್ಲೆಯಂತಹ ಘಟನೆ ನಡೆಯುತ್ತಿವೆ. ಅದಕ್ಕಾಗಿ ಪ್ರತಿಯೊಬ್ಬ ರಿಗೂ ಉತ್ತಮ ಮೊಬೈಲ್, ಪ್ರಿಂಟರ್, ಟೇಬಲ್, ಲ್ಯಾಪ್ ಟಾಪ್ ಸೇರಿದಂತೆ ಮೂಲ ಸೌಕರ್ಯ ಕೂಡಲೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅಂತರ್ ಜಿಲ್ಲಾ ಪತಿ-ಪತ್ನಿ ಪ್ರಕರಣ ವರ್ಗಾವಣೆಗೆ ಚಾಲನೆ ನೀಡಬೇಕು. ಸೇವೆ ಆಧಾರದಲ್ಲಿ ಅಂತರ್‌ಜಿಲ್ಲೆ ವರ್ಗಾವಣೆಗೆ ಅವಕಾಶ ನೀಡಬೇಕು. ಮೊಬೈಲ್ ತಂತ್ರಾಂಶ ಕಾರಣಕ್ಕೆ ಈವರೆಗೆ ಆಗಿರುವ ಎಲ್ಲ ಅಮಾನತು ರದ್ದುಪಡಿಸಬೇಕು. ಪ್ರಯಾಣ ಭತ್ಯೆ ಹೆಚ್ಚಿಸಬೇಕು. ಕೆಲಸದ ಅವಧಿ ನಂತರ ನಡೆಸುವ ವರ್ಚುಯಲ್ ಸಭೆ ರದ್ದುಗೊಳಿಸಬೇಕು. ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಬೇಡಿಕೆ ಈಡೇರಿಸದ ಕಾರಣ ಎರಡನೇ ಹಂತದ ಅನಿರ್ಧಿಷ್ಠಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸಿದ ನಂತರ ಮುಷ್ಕರ ಕೈಬಿಡಲಾಗುವುದು ಎಂದರು.
ಗ್ರಾಮ ಆಡಳಿತ ಅಧಿಕಾರಿಗಳ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಎಂ.ಎಚ್. ಹರ್ಷ, ಗೌರವಾಧ್ಯಕ್ಷ ಗಿರೀಶ್ ಗೌಡ, ತಾಲ್ಲೂಕು ಕಂದಾಯ ನೌಕರರ ಸಂಘದ ಅಧ್ಯಕ್ಷ ಮಿಥುನ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಮಹಾರುದ್ರಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಪ್ರವೀಣ್, ಆಡಳಿತಾಧಿಕಾರಿಗಳಾದ ನಾಗರಾಜ್, ಗಣೇಶ್, ಯಲ್ಲಾಲಿಂಗ ಅವಿನಾಶ್, ರಾಹುಲ್ ರಾಥೋಡ್, ಶಿವಾನಂದ್, ಮಹೇಶ್, ಪ್ರವೀಣ್, ಸತೀಶ್, ಉಮಾಶಂಕರ್, ದಾನೇಶ್, ಮುದುಕಜ್ಜ, ವಿನಾಯಕ, ಅರುಣ್, ಹೇಮಾವತಿ, ಭಾವನಾ, ಸೀಮಾ, ರುಕ್ಮಿಣಿ, ಸುಮಿತ್ರಾಬಾಯಿ, ರೂಪಾ, ಶಾರದಮ್ಮ, ಗೀತಾ, ಪೂಜಾ, ನೀಲಮ್ಮ, ಕಲ್ಪನಾ, ಸುಬ್ಬಮ್ಮ ಉಪಸ್ಥಿತರಿದ್ದರು.
Leave a comment