ಶಿಕಾರಿಪುರ ಲೈವ್:
ತಾಲ್ಲೂಕಿನಲ್ಲಿ ಅಹಿಂದ ವರ್ಗದ ಮುಖಂಡರನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸಿದ್ದು,ಅಹಿಂದ ವರ್ಗದವರನ್ನು ಸಂಘಟಿಸಲು ಅಹಿಂದ ಸಂಘಟನೆಯನ್ನು ಸದೃಢಗೊಳಿಸಲು ಮುಂದಾಗಿದ್ದೇವೆ ಎಂದು ಅಹಿಂದ ಸಂಘಟನೆ ತಾಲ್ಲೂಕು ಅಧ್ಯಕ್ಷ ಕಾಗಿನಲ್ಲಿ ರಂಗಪ್ಪ ಹೇಳಿದರು.
ಪಟ್ಟಣದ ಸುದ್ದಿ ಮನೆಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆವರು, ಕೆಲವು ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ ಸಂದರ್ಭದಲ್ಲಿ ಮಾತ್ರ ಅಹಿಂದ ವರ್ಗದ ಜನರನ್ನು ಬಳಕೆ ಮಾಡಿಕೊಳ್ಳುತ್ತಾರೆ. ಆದರೆ ಚುನಾವಣೆ ನಂತರ ಅಹಿಂದ ವರ್ಗಕ್ಜೆ ರಾಜಕೀಯ ಸ್ಥಾನಮಾನಗಳನ್ಬು ನೀಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅಹಿಂದ ವರ್ಗವನ್ನು ಜಾಗೃತಗೊಳಿಸಲು ಪಟ್ಟಣದ ಅಂಚೆಕಚೇರಿ ಸಮೀಪದ ಪೌರವಿಹಾರದ ವಾಣಿಜ್ಯ ಸಂಕೀರ್ಣದಲ್ಲಿ ಫೆಬ್ರವರಿ 11ರಂದು ಅಹಿಂದ ಕಚೇರಿಯನ್ನು ಆರಂಭಿಸಲಾಗುತ್ತದೆ. ಮುಂಬರುವ ಚುನಾವಣೆಗಳಲ್ಲಿ ನಮ್ಮ ಸಂಘಟನೆ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಲಾಗುವುದು ಎಂದರು.
ಕರ್ನಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಚುರ್ಚಿಗುಂಡಿ ಜಗದೀಶ್ ಮಾತನಾಡಿ, ತಾಲೂಕಿನಲ್ಲಿ ಅಹಿಂದ ವರ್ಗದ ಜನರು ಶೈಕ್ಷಣಿಕ,ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಅಹಿಂದ ವರ್ಗದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಮ್ಮ ಅಹಿಂದ ಸಂಘಟನೆ ಮಾಡಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹಾಗೂ ಅಹಿಂದ ಮುಖಂಡ ಭಂಡಾರಿ ಮಾಲತೇಶ್ ಮಾತನಾಡಿ,
ತಾಲೂಕಿನಲ್ಲಿ ರಾಜಕೀಯ ಪಕ್ಷಗಳಲ್ಲಿ ಅಹಿಂದ ಮುಖಂಡರು ಹಾಕುವ ಶ್ರಮಕ್ಕೆ ಗೌರವ ಹಾಗೂ ಸೂಕ್ತ ಪ್ರತಿಫಲ ಸಿಗುತ್ತಿಲ್ಲ. ಆದ್ದರಿಂದ ಪಕ್ಷಾತೀತವಾಗಿ ಅಹಿಂದ ಸಂಘಟನೆ ಆರಂಭಿಸಿದ್ದೇವೆ ಎಂದರು.
ಮುಖಂಡರಾದ ತಿಮ್ಲಾಪುರ ಹುಚ್ಚರಾಯಪ್ಪ,
ನಗರದ ಮಾಲತೇಶ್, ಹನುಮಂತಪ್ಪ ಕಡೇನಂದಿಹಳ್ಳಿ, ಕುಮಾರನಾಯ್ಕ ಗೊದ್ದನಕೊಪ್ಪ, ಕೊಟ್ಟ ಹಾಲೇಶ್, ಮುಷೀರ್ ಅಹಮದ್, ಮಂಜನಾಯ್ಕ ಗೊಗ್ಗ, ಸಚಿನ್ ಅರಷಿಣಗೆರೆ ಮತ್ತಿತರರು ಉಪಸ್ಥಿತರಿದ್ದರು.
Leave a comment