ಶಿಕಾರಿಪುರ ಲೈವ್:
ಯುವ ಸಮುದಾಯ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಸಲಹೆ ನೀಡಿದರು.
ತಾಲೂಕಿನ ನೆಲವಾಗಿಲು ಗ್ರಾಮ ಸಮೀಪದಲ್ಲಿ ಬುಧವಾರ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಶಿವಮೊಗ್ಗದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ ಆಶ್ರಯದಲ್ಲಿ ಬಿಎಸ್ಸಿ ಕೃಷಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ನಡೆದ ಕೃಷಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಬೆನ್ನೆಲುಬು ರೈತರಾಗಿದ್ದು,ದೇಶಕ್ಕೆ ಜನರಿಗೆ ಅನ್ನ ನೀಡುವ ಪವಿತ್ರ ಕೆಲಸ ಕೃಷಿ ಚಟುವಟಿಕೆಯಾಗಿದೆ. ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿ ಕ್ಷೇತ್ರದಲ್ಲಿ ಲಾಭಗೊಳಿಸಲು ಸಾಧ್ಯ ವಾಗಲಿದೆ. ವಿದ್ಯಾರ್ಥಿಗಳು ಹಲವು ದಿನಗಳ ಕಾಲ ಗ್ರಾಮದಲ್ಲಿ ರೈತರಿಗೆ ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ನೀಡಿರುವುದು ಒಳ್ಳೆ ಕಾರ್ಯವಾಗಿದೆ. ಗ್ರಾಮದಲ್ಲಿ ಕೃಷಿ ಮೇಳ ಆಯೋಜಿಸಿರುವುದು ರೈತರಿಗೆ ಅನುಕೂಲವಾಗಲಿದೆ ಎಂದು ಶ್ಲಾಘಿಸಿದರು.
ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿ, ಇರುವಕ್ಕಿಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಯಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಸುರಗೀಹಳ್ಳಿ ಮೂಕಪ್ಪಶಿವಯೋಗಿ ಮಠದ ಮಹಾಂತ ಮಂದಾರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಕೃಷಿ ಮೇಳದಲ್ಲಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿಕೊಂಡು ಪ್ರಗತಿ ಹೊಂದಿರುವ ತೀರ್ಥಹಳ್ಳಿಯ ಸಚಿನ್, ಜೇನು ಕೃಷಿಕ ವಿಜ್ಞೇಶ್, ಎಕೋ ಫೈಟೋಕೇರ್ ಕಂಪನಿಯ ನಿರಂಜನ್ , ಕಲ್ಪತರು ನರ್ಸರಿಯ ಪ್ರಸನ್ನ ರೈತರಿಗೆ ಮಾಹಿತಿಯನ್ನು ನೀಡಿದರು.
ಕೃಷಿ ವಿವಿ ಕುಲಪತಿ ಪ್ರೊ.ಆರ್.ಸಿ.ಜಗದೀಶ್, ಕೃಷಿ ವಿವಿ ಕುಲಸಚಿವ ಡಾ.ಕೆ.ಸಿ ಶಶಿಧರ್, ಕಾಡಾ ಮಾಜಿ ಅಧ್ಯಕ್ಷ ಮಹದೇವಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ. ನಾಗರಾಜ ಗೌಡ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸದಸ್ಯರು ಉಪಸ್ಥಿತರಿದ್ದರು.
ಆಕರ್ಷಿಸಿದ ಮೆರವಣಿಗೆ
ಉದ್ಘಾಟನಾ ಕಾರ್ಯಕ್ರಮಕ್ಕೂ ನಡೆದ ಮೆರವಣಿಗೆ ರೈತರನ್ನು ಆಕರ್ಷಿಸಿತು. ಮಹಿಳೆಯರ ಪೂರ್ಣ ಕುಂಭ ಮೆರವಣಿಗೆ,ಛದ್ಮವೇಶ ಧರಿಸಿದ್ದ ಮಕ್ಕಳು,ಬೊಂಬೆ ಕುಣಿತ,ಅಲಂಕಾರಿತ ಹೋರಿಗಳು,ಡೊಳ್ಳು ಕುಣಿತ, ವೀರಗಾಸೆ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
Leave a comment