ಶಿಕಾರಿಪುರ ಲೈವ್:
ತಾಲ್ಲೂಕಿನ ಈಸೂರು ಗ್ರಾಮದಿಂದ ಅಂಜನಾಪುರ ಕೆಪಿಟಿಸಿಎಲ್ ಗ್ರೀಡ್ ವರೆಗೆ ವಿದ್ಯುತ್ ಮಾರ್ಗ ನಿರ್ಮಾಣ ನಿಲ್ಲಿಸಬೇಕು ಎಂದು ಒತ್ತಾಯಿಸಿ
ಚಿಕ್ಕಜೋಗಿಹಳ್ಳಿ, ಈಸೂರು ಹಾಗೂ ಚುರ್ಚಿಗುಂಡಿ, ಕೊರಲಹಳ್ಳಿ ಗ್ರಾಮದ ರೈತರು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನಾ. ಶ್ರೀನಿವಾಸ್, ಈಸೂರಿನಿಂದ ಅಂಜನಾಪುರ ಕೆಪಿಟಿಸಿಎಲ್ ಗ್ರೀಡ್ ವರೆಗೆ ವಿದ್ಯುತ್ ಮಾರ್ಗದ ನಿರ್ಮಾಣ ಮಾಡಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ. ಕೇವಲ 4ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಬಹುದಾದ ವಿದ್ಯುತ್ ಮಾರ್ಗವನ್ನು13 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕೊಂಡೊಯ್ಯಲು ಕಾಮಗಾರಿ ನಡೆಸಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ.
ಈ ವಿದ್ಯುತ್ ಮಾರ್ಗ ನಿರ್ಮಾಣದಿಂದ ಅಡಿಕೆ ಬೆಳೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದ ರೈತರ ಭೂಮಿಗೆ ತೊಂದರೆಯಾಗಲಿದೆ. ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿ ನಡೆಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ, ವಿದ್ಯುತ್ ಮಾರ್ಗ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ರೈತರ ಭೂಮಿಗೆ ತೊಂದರೆಯಾಗದಂತೆ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲು ಸೂಚಿಸುತ್ತೇನೆ ಎಂದು ಭರವಸೆ ನೀಡಿದರು
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ಸಾಗರ ಉಪವಿಭಾಗಧಿಕಾರಿ ಆರ್. ಯತೀಶ್, ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ. ನಾಗರಾಜ್ ಗೌಡ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಮ್, ರೈತ ಮುಖಂಡರಾದ ಮಾಜಿ ಸೈನಿಕ ರವಿ, ಈಸೂರು ಸಂತೋಷ್, ಬೇಗೂರು ಶಿವಪ್ಪ, ಡಿ.ಎಸ್. ಈಶ್ವರಪ್ಪ, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
Leave a comment